
ಗದಗ, 24 ಫೆಬ್ರವರಿ (ಹಿ.ಸ.):
ಆ್ಯಂಕರ್:
ಪುಲಿಗೆರೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ 9ನೇ ವರ್ಷದ ಪುಲಿಗೆರೆ ಉತ್ಸವದ ಅಂಗವಾಗಿ ಆರಾಧ್ಯ ದೈವ ಶ್ರೀ ಸೋಮೇಶ್ವರನ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.
ಸಕಲ ವಾದ್ಯ ವೈಭವಗಳೊಂದಿಗೆ ನಡೆದ ಮೆರವಣಿಗೆ ಪಟ್ಟಣದ ಜನಮನ ಸೆಳೆದಿತು.
ಮೆರವಣಿಗೆಯಲ್ಲಿ ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳು ಮೇಳ, ನಂದಿಕೋಲು ಕುಣಿತ, ವಿವಿಧ ವಾದ್ಯಮೇಳಗಳು ಹಾಗೂ ಪೂರ್ಣಕುಂಭ ಮೆರವಣಿಗೆ ಉತ್ಸವದ ರಂಗು ಹೆಚ್ಚಿಸಿತು.
ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಮಾರ್ಗದಲ್ಲಿ ಭಕ್ತರು ತಮ್ಮ ಮನೆಗಳ ಮುಂಭಾಗವನ್ನು ಸ್ವಚ್ಚಗೊಳಿಸಿ ರಂಗೋಲಿ ಹಾಕಿ, ಶೃಂಗರಿಸಿ ಶ್ರೀ ಸೋಮೇಶ್ವರನಿಗೆ ಭಕ್ತಿಭಾವದಿಂದ ನಮಿಸಿದರು.
ಜಾಗಟೆ–ಗಂಟೆಗಳ ನಾದಗಳೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಸಾಗಿದ ಉತ್ಸವ ಮೂರ್ತಿ ಪಟ್ಟಣದ ಮುಖ್ಯ ಬಜಾರ್ ಸೇರಿ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ, ಮೆರವಣಿಗೆ ಪುನಃ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಭಕ್ತರ ಜಯಘೋಷ, ವಾದ್ಯಗಳ ಗೋಜಿಗೆ ಉತ್ಸವದ ಸಂಭ್ರಮ ಮೇರೆಯಿತು.
ಮೆರವಣಿಗೆಯಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ್ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಮಹಿಳಾ ಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಒಟ್ಟಾರೆ 9ನೇ ವರ್ಷದ ಪುಲಿಗೆರೆ ಉತ್ಸವದ ಪಲ್ಲಕ್ಕಿ ಮೆರವಣಿಗೆ ಧಾರ್ಮಿಕ ಸಂಭ್ರಮ, ಸಾಂಸ್ಕೃತಿಕ ವೈಭವ ಮತ್ತು ಭಕ್ತಿಭಾವದೊಂದಿಗೆ ಯಶಸ್ವಿಯಾಗಿ ನೆರವೇರಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP