
ಗದಗ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ನಡೆದ ಲೋಕಾಯುಕ್ತ ದಾಳಿ ಪೂರ್ವನಿಯೋಜಿತ ಷಡ್ಯಂತ್ರವಾಗಿದ್ದು, ಇದರ ಹಿಂದೆ ಹಲವರ ಕೈವಾಡ ಇದೆ ಎಂದು ಬಂಜಾರ (ಲಂಬಾಣಿ) ಸಮಾಜದ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಗದಗ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಲೋಕಾಯುಕ್ತ ದಾಳಿಯನ್ನು ದುಷ್ಕಶಕ್ತಿಗಳು ರೂಪಿಸಿದ್ದು, ಶಾಸಕರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗನಲ್ಲಿ ಬಂಜಾರ ಸಮಾಜದ ಮುಖಂಡರು ಮಾತನಾಡಿ, “ಕೇವಲ 5 ಲಕ್ಷ ರೂಪಾಯಿ ಆಸೆ ಪಡುವ ವ್ಯಕ್ತಿ ಶಾಸಕರಾಗಲು ಸಾಧ್ಯವೇ ಇಲ್ಲ. ಶಾಸಕರು ಯಾವುದೇ ಪರಿಸ್ಥಿತಿಯಲ್ಲೂ ಕುಗ್ಗುವ ಅಗತ್ಯವಿಲ್ಲ. ದುಷ್ಕಶಕ್ತಿಗಳು ಒಂದಾಗಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ” ಎಂದು ಆರೋಪಿಸಿದರು.
ಲೋಕಾಯುಕ್ತಕ್ಕೆ ದೂರು ನೀಡಿದವರು ಕಾಂಗ್ರೆಸ್ ಪಕ್ಷದವರೇ ಎಂಬ ಅನುಮಾನ ವ್ಯಕ್ತವಾಗಿದ್ದು, ಇದು ಸಂಪೂರ್ಣ ರಾಜಕೀಯ ಪ್ರೇರಿತ ಪ್ರಕರಣವಾಗಿದೆ ಎಂದು ಹೇಳಿದರು.
ಐದು ಲಕ್ಷ ರೂಪಾಯಿ ಎಲ್ಲಿಂದ ತಂದು ಕೊಟ್ಟಿದ್ದಾರೆ ಎಂಬುದೇ ಅನುಮಾನವಾಗಿದ್ದು, ಆಸ್ಪತ್ರೆಯಲ್ಲಿ ಸಾಕಷ್ಟು ಜನರು ಬರುತ್ತಾರೆ ಎಂಬ ನೆಪದಲ್ಲಿ ಈ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.
ಬಂಜಾರ ಮಹಾಸಭಾ ವತಿಯಿಂದ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಣೆ ಮಾಡಲಾಯಿತು. ಒಳಮೀಸಲಾತಿ ವಿಚಾರದಲ್ಲಿ ಬಂಜಾರ ಹಾಗೂ ದಲಿತ ಸಮಾಜಕ್ಕೆ ತೀವ್ರ ಅನ್ಯಾಯವಾಗಿದ್ದು, ಈ ಹಿನ್ನೆಲೆಯಲ್ಲಿಯೂ ಶಾಸಕರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಮುಖಂಡರು ಆರೋಪಿಸಿದರು.
ಇನ್ನು ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎನ್ನಲಾದ ಕುಮಾರ ಮಹಾರಾಜ ಹಾಗೂ ಕೆಲ ಸ್ವಾಮೀಜಿಗಳ ವಿರುದ್ಧವೂ ಬಂಜಾರ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸ್ವಾಮೀಜಿ ಹಾಗೂ ಕೆಲವು ಲೀಡರ್ಗಳ ಕೈವಾಡ ಈ ಪ್ರಕರಣದಲ್ಲಿ ಇದೆ. ಸ್ವಾಮೀಜಿಗಳ ವಿಡಿಯೋ ವೈರಲ್ ಆಗಿದ್ದು, ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದಲೇ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
“ನಮ್ಮ ಸಮಾಜದಲ್ಲಿ ಅವರನ್ನು ಸ್ವಾಮೀಜಿ ಎಂದು ನಾವು ಸ್ವೀಕರಿಸಿಲ್ಲ. ಕವಿ ಮಠದ ಹೆಸರನ್ನು ದುರುಪಯೋಗಪಡಿಸಿಕೊಂಡು ಅವರು ಸಂಚರಿಸುತ್ತಿದ್ದಾರೆ. ಇಂತಹ ಸ್ವಾಮೀಜಿಗಳನ್ನು ನಿರ್ಬಂಧಿಸಬೇಕು” ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.
ಶಾಸಕರ ವಿರುದ್ಧ ನಾಲಿಗೆ ಹರಿ ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕುಮಾರ ಮಹಾರಾಜ ನಮ್ಮ ಸಮಾಜದ ಸ್ವಾಮಿಯೇ ಅಲ್ಲ, ಗುರುಪುತ್ರನೂ ಅಲ್ಲ. ಬಂಜಾರ ಸಂಸ್ಕೃತಿಯೇ ಗೊತ್ತಿಲ್ಲದ ವ್ಯಕ್ತಿ ಸಮಾಜದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು. ಶೀಘ್ರದಲ್ಲೇ ಲಂಬಾಣಿ ಸಮಾಜದ ನಾಯಕರು, ಕಾರಭಾರಿಗಳು ಹಾಗೂ ಢಾವ್ ಸೇರಿ ಸಭೆ ನಡೆಸಿ ಕುಮಾರ ಮಹಾರಾಜರನ್ನು ಸಮಾಜದಿಂದ ಭಹಿಷ್ಕರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ಈ ಬೆಳವಣಿಗೆಗಳು ಗದಗ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಹಿಂದೂಸ್ತಾನ್ ಸಮಾಚಾರ್ / lalita MP