ದರ್ಶನ್ ಆರೋಗ್ಯ ಚೇತರಿಕೆಗೆ ವಿಜಯಲಕ್ಷ್ಮಿ ವಿಶೇಷ ಪೂಜೆ
ಆನೇಕಲ್ನ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ, ಗೋಮಾತೆಗೂ ವಿಶೇಷ ಆರಾಧನೆ
vijayalakshmi-special-puja-anekal-chowdeshwari-temple-for-darshans-health


ಬೆಂಗಳೂರು, 09 ನವೆಂಬರ್ (ಹಿ.ಸ):

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಆರೋಗ್ಯ ಸಮಸ್ಯೆ ಹಾಗೂ ಜಾಮೀನು ವಿಚಾರಗಳು ಕುಟುಂಬದ ಆತಂಕಕ್ಕೆ ಕಾರಣವಾಗಿವೆ.

ಈ ನಡುವೆ ಪತಿಯ ಆರೋಗ್ಯ ಸುಧಾರಣೆಯಾಗಬೇಕು, ಎದುರಾಗಿರುವ ಸಂಕಷ್ಟಗಳು ದೂರವಾಗಿ ಕುಟುಂಬದಲ್ಲಿ ಮತ್ತೆ ನೆಮ್ಮದಿ ನೆಲೆಸಬೇಕು ಎಂಬ ಆಶಯದೊಂದಿಗೆ ಪತ್ನಿ ವಿಜಯಲಕ್ಷ್ಮಿ ದೇವಾಲಯಗಳ ಭೇಟಿ ಮುಂದುವರಿಸಿದ್ದಾರೆ.

ಇದೀಗ ವಿಜಯಲಕ್ಷ್ಮಿ ಅವರು ಆನೇಕಲ್ ಪಟ್ಟಣದ ತಿಲಕ್ ವೃತ್ತದಲ್ಲಿರುವ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದಲ್ಲಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ವಿಜಯಲಕ್ಷ್ಮಿ, ಪತಿ ದರ್ಶನ್ ಹೆಸರಿನಲ್ಲಿ ವಿಶೇಷ ಸಂಕಲ್ಪ ಪೂಜೆ ನೆರವೇರಿಸಿ ಮಹಾಮಂಗಳಾರತಿ ಮಾಡಿಸಿದ್ದಾರೆ.

ದರ್ಶನ್ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಾಣಿಸಿಕೊಳ್ಳಲಿ ಹಾಗೂ ಕಾನೂನು ಹೋರಾಟದಲ್ಲಿ ಅನುಕೂಲಕರ ಫಲಿತಾಂಶ ದೊರೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.

ಗೋಮಾತೆಗೂ ವಿಶೇಷ ಪೂಜೆ

ಚೌಡೇಶ್ವರಿ ದೇವಿಯ ಆರಾಧನೆಯ ಬಳಿಕ ವಿಜಯಲಕ್ಷ್ಮಿ ಅವರು ಗೋಮಾತೆಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪತಿಯ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗಲಿ, ಕುಟುಂಬ ಎದುರಿಸುತ್ತಿರುವ ಸಂಕಷ್ಟಗಳು ನಿವಾರಣೆಯಾಗಿ ಸುಖ-ಶಾಂತಿ ಮರಳಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ದರ್ಶನ್ ಸಂಕಷ್ಟದ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದು ಗಮನ ಸೆಳೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande