ಹೆಚ್ಡಿಕೆ ಲಂಚದ ಆರೋಪಕ್ಕೆ ಡಿಸಿ ಲತಾಕುಮಾರಿ ತಿರುಗೇಟು; ಸಿಂಹ-ನಾಯಿ ಇಮೇಜ್ ಪೋಸ್ಟ್ ವೈರಲ್
ಹೆಚ್.ಡಿ. ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ತಿರುಗೇಟು ನೀಡಿದ್ದ ಹಾಸನ ಡಿಸಿ ಲತಾಕುಮಾರಿ, ಸಿಂಹ ಮತ್ತು ನಾಯಿಗಳ ಚಿತ್ರವಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. 'ಪ್ರತಿಯೊಂದು ಧ್ವನಿಗೂ ಪ್ರತಿಕ್ರಿಯೆ ನೀಡಬೇಕಿಲ್ಲ' ಎಂಬ ಸಂದೇಶದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
dc-lathakumari-hits-back-at-hd-kumaraswamy-bribery-allegations-lion-dog-post-goes-viral


ಹಾಸನ, 09 ನವೆಂಬರ್ (ಹಿ.ಸ.):

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪಕ್ಕೆ ತಿರುಗೇಟು ನೀಡಿದ್ದ ಲತಾಕುಮಾರಿ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಂಹ ಮತ್ತು ನಾಯಿಗಳ ಚಿತ್ರವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಹಾಗೂ ಎಕ್ಸ್ ಖಾತೆಯಲ್ಲಿ ಸಿಂಹವೊಂದು ಸುಮ್ಮನೆ ಕುಳಿತಿದ್ದರೆ, ಅದರ ಸುತ್ತ ನಾಯಿಗಳು ಬೊಗಳುತ್ತಿರುವ ಚಿತ್ರವನ್ನು ಲತಾಕುಮಾರಿ ಹಂಚಿಕೊಂಡಿದ್ದಾರೆ. ಚಿತ್ರದೊಂದಿಗೆ 'NOT EVERY VOICE DESERVES A RESPONSE' (ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ) ಎಂಬ ಸಂದೇಶವನ್ನೂ ಪ್ರಕಟಿಸಿದ್ದಾರೆ.

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಪರೋಕ್ಷ ತಿರುಗೇಟು ಎಂಬ ಚರ್ಚೆ ನಡೆಯುತ್ತಿದೆ.

ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಡಳಿತದಲ್ಲಿ ಲಂಚದ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದ ಅವರು, ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸ್ಆ್ಯಪ್ ಸಂಭಾಷಣೆಯ ದಾಖಲೆಗಳನ್ನೂ ಬಹಿರಂಗಪಡಿಸಿದ್ದರು.

ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರಿಯಲು 75 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂಬ ಆರೋಪವನ್ನೂ ಮಾಡಿದ್ದರು.

ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಜಿಲ್ಲಾಧಿಕಾರಿ ಲತಾಕುಮಾರಿ, ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು. ಮೊದಲ ದಿನದಿಂದಲೂ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಇಂತಹ ಆರೋಪಗಳಿಗೆ ನಾವು ಹೆದರುವುದಿಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧರಾಗಿಯೇ ಬಂದಿದ್ದೇವೆ ಎಂದು ತಿರುಗೇಟು ನೀಡಿದ್ದರು.

ಅಲ್ಲದೆ, ವಾಟ್ಸ್ಆ್ಯಪ್ ಚಾಟ್ಗಳ ಸತ್ಯಾಸತ್ಯತೆ ತಿಳಿಯಲು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುವುದಾಗಿ ತಿಳಿಸಿದ್ದರು.

ಇದೀಗ ಸಿಂಹ-ನಾಯಿ ಚಿತ್ರವಿರುವ ಪೋಸ್ಟ್ ಮೂಲಕ ಮತ್ತೊಮ್ಮೆ ಪರೋಕ್ಷ ಸಂದೇಶ ರವಾನಿಸಿರುವ ಜಿಲ್ಲಾಧಿಕಾರಿಯ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande