
ಬೆಂಗಳೂರು, 09 ನವೆಂಬರ್ (ಹಿ.ಸ.):
ಕಾಂಗ್ರೆಸ್ ಕಾರ್ಯಕರ್ತರಿಂದ ದಿನನಿತ್ಯ ತಮ್ಮ ವಿಳಾಸಕ್ಕೆ ಚಾಕು ಮತ್ತು ಚೂರಿಗಳನ್ನು ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಇಂತಹ ಬೆದರಿಕೆಗಳ ಮೂಲಕ ತಮ್ಮ ಧೈರ್ಯ ಕುಗ್ಗಿಸಿ ಹೋರಾಟದ ಹಾದಿಯಿಂದ ಹಿಂದೆ ಸರಿಸಬಹುದು ಎಂಬುದು ಬೆದರಿಕೆ ಹಾಕುವವರ ಹಗಲುಗನಸಾಗಿದೆ ಎಂದು ಟೀಕಿಸಿದ್ದಾರೆ.
ಇಂತಹ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಅಥವಾ ಬಗ್ಗುವುದಿಲ್ಲ. ಬೆದರಿಕೆಗಳಿಗೆ ಮಣಿಯುವ ರಕ್ತ ತಮ್ಮದಲ್ಲ. ಬಾಬಾಸಾಹೇಬರ ವಿಚಾರಧಾರೆ, ಸ್ವಾಭಿಮಾನ ಮತ್ತು ಹೋರಾಟದ ಸಂಕಲ್ಪವೇ ತಮ್ಮ ಶಕ್ತಿ ಎಂದು ತಿಳಿಸಿದ್ದಾರೆ.
ಈ ಕೃತ್ಯದ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಕಾನೂನಿನ ಮೂಲಕವೇ ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾರೆ.
ತಮ್ಮ ಹೋರಾಟ ನಿಲ್ಲುವುದಿಲ್ಲ, ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.