ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ: ಮಿಂಟೋ ಆಸ್ಪತ್ರೆಯಲ್ಲಿ 14 ಪ್ರಕರಣ ದಾಖಲು; 10 ಮಂದಿಗೆ ಗಂಭೀರ ಗಾಯ
ದೀಪಾವಳಿ ಪಟಾಕಿ ಸಿಡಿತದಿಂದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 14 ಮಂದಿಗೆ ಕಣ್ಣಿನ ಗಾಯಗಳಾಗಿದ್ದು, 10 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳ ಪೈಕಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Minto Hospital Reports 14 Eye Injuries Due to Firecracker Bursts, 10 Cases Serious


ಬೆಂಗಳೂರು, 09 ನವೆಂಬರ್ (ಹಿ.ಸ.):

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಳ್ಳುವ ಪ್ರಕರಣಗಳು ಹೆಚ್ಚಾಗಿವೆ.

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನವೆಂಬರ್ 6ರಿಂದ 8ರವರೆಗೆ ಒಟ್ಟು 14 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಈ ಪೈಕಿ 10 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಾಲ್ವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ.

ನವೆಂಬರ್ 6ರಂದು ಒಂದು ಪ್ರಕರಣ, ನವೆಂಬರ್ 7ರಂದು ಒಂದು ಪ್ರಕರಣ ಹಾಗೂ ನವೆಂಬರ್ 8ರಂದು ಒಂದೇ ದಿನ 12 ಪ್ರಕರಣಗಳು ವರದಿಯಾಗಿವೆ.

ಗಾಯಗೊಂಡವರಲ್ಲಿ ಐದು ವರ್ಷದ ಬಾಲಕ ಹಾಗೂ ಒಂಬತ್ತು ವರ್ಷದ ಬಾಲಕ ಸೇರಿದ್ದಾರೆ.

10ರಿಂದ 20 ವರ್ಷದೊಳಗಿನ ಮೂವರು, 20ರಿಂದ 40 ವರ್ಷದೊಳಗಿನ ಎಂಟು ಮಂದಿ ಹಾಗೂ 40 ವರ್ಷ ಮೇಲ್ಪಟ್ಟ ಒಬ್ಬರು ಗಾಯಗೊಂಡಿದ್ದಾರೆ.

ಲಿಂಗವಾರು ಅಂಕಿ-ಅಂಶಗಳ ಪ್ರಕಾರ ನಾಲ್ವರು ಬಾಲಕರು, ಒಬ್ಬ ಬಾಲಕಿ, ಏಳು ಮಂದಿ ವಯಸ್ಕ ಪುರುಷರು ಹಾಗೂ ಇಬ್ಬರು ಮಹಿಳೆಯರು ಪಟಾಕಿ ಸಿಡಿತದಿಂದ ಕಣ್ಣಿನ ಗಾಯಕ್ಕೆ ಒಳಗಾಗಿದ್ದಾರೆ.

ಇನ್ನು ಗಾಯಗೊಂಡ 14 ಮಂದಿಯ ಪೈಕಿ ನಾಲ್ವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಿಗೆ ಔಷಧಿ ಹಾಗೂ ಇತರೆ ಚಿಕಿತ್ಸೆಗಳ ಮೂಲಕ ನಿರ್ವಹಣೆ ಮಾಡಲಾಗಿದ್ದು, ಇನ್ನಿಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಬಿಜಿಲಿ ಪಟಾಕಿಯಿಂದ ನಾಲ್ವರು ಗಾಯಗೊಂಡಿದ್ದರೆ, ಹೂವಿನ ಕುಂಡ, ಬಾಂಬ್, ಲಕ್ಷ್ಮೀ ಪಟಾಕಿ ಹಾಗೂ ರಾಕೆಟ್ನಿಂದ ತಲಾ ಒಬ್ಬರು ಗಾಯಗೊಂಡಿದ್ದಾರೆ. ಉಳಿದ ಐದು ಪ್ರಕರಣಗಳಲ್ಲಿ ಯಾವ ಪಟಾಕಿಯಿಂದ ಗಾಯವಾಗಿದೆ ಎಂಬುದು ತಿಳಿದುಬಂದಿಲ್ಲ.

ಗಮನಾರ್ಹ ಸಂಗತಿಯೆಂದರೆ, ಗಾಯಗೊಂಡವರಲ್ಲಿ ಕೇವಲ ಇಬ್ಬರು ಮಾತ್ರ ಸ್ವತಃ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ.

ಉಳಿದ 12 ಮಂದಿ ಪಕ್ಕದಲ್ಲಿ ನಿಂತಿದ್ದಾಗ ಅಥವಾ ಇತರರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. ಬಹುತೇಕ ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿದ್ದು, ರಾಯಚೂರು ಹಾಗೂ ದೊಡ್ಡಬಳ್ಳಾಪುರದಿಂದ ತಲಾ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಿಂಟೋ ಆಸ್ಪತ್ರೆಗೆ ರವಾನಿಸಲಾಗಿದೆ.

ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ ವಹಿಸದಿದ್ದರೆ ಸ್ವತಃ ಸಿಡಿಸುವವರಷ್ಟೇ ಅಲ್ಲದೆ, ಸುತ್ತಮುತ್ತಲಿನವರ ಕಣ್ಣಿಗೂ ಅಪಾಯ ಎದುರಾಗಬಹುದು ಎಂಬುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ.

ಆದ್ದರಿಂದ ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಕಣ್ಣಿನ ರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande