ದೀಪಾವಳಿಯಂದೇ ಅಗ್ನಿ ಅವಘಡ: ಮೂರು ಅಂಗಡಿಗಳು ಸುಟ್ಟು ಭಸ್ಮ, ಲಕ್ಷಾಂತರ ರೂ. ನಷ್ಟ
ದೀಪಾವಳಿ ಹಬ್ಬದಂದೇ ಮಂಡ್ಯ ಜಿಲ್ಲೆಯ ಚಿನಕುರಳಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂರು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
Mandya-Chinakurali-Fire-Mishap-Three-Shops-Gutted-Diwali


ಮಂಡ್ಯ, 09 ನವೆಂಬರ್ (ಹಿ.ಸ.):

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಅಂಗಡಿಗಳಿಗೆ ಬೆಂಕಿ ತಗುಲಿ ಮೂರು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಚಿನಕುರಳಿಯಲ್ಲಿ ನಡೆದಿದೆ.

ಘಟನೆಯಿಂದಾಗಿ ಅಂಗಡಿಗಳಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಹಬ್ಬದ ದಿನವೇ ಸಂಭವಿಸಿದ ಈ ಅಗ್ನಿ ಅವಘಡದಿಂದ ವ್ಯಾಪಾರಸ್ಥರು ಆತಂಕಕ್ಕೊಳಗಾಗಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಕಟ್ಟಡದ ಉಳಿದ ಭಾಗಗಳಿಗೆ ಬೆಂಕಿ ಹರಡುವುದು ತಪ್ಪಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಕ್ಯಾತನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಿಂದಿನ ದಿನವಷ್ಟೇ ಪಾತ್ರೆ ಅಂಗಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು.

ಆದರೆ ಮರುದಿನ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಪಾತ್ರೆ ಅಂಗಡಿಯೊಂದಿಗೆ ಪಕ್ಕದ ಮೆಡಿಕಲ್ ಸ್ಟೋರ್ ಮತ್ತು ಪ್ರಾವಿಷನ್ ಸ್ಟೋರ್ಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪಾತ್ರೆ ಅಂಗಡಿ ಮಾಲಿಕ ಅಳಲು ತೋಡಿಕೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande