ದೀಪಾವಳಿ ಹಬ್ಬಕ್ಕೆ ಹೂವುಗಳಿಗೆ ಭರ್ಜರಿ ಬೇಡಿಕೆ
ಗದಗ, 09 ನವೆಂಬರ್ (ಹಿ.ಸ.) ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಬರಗಾಲ ಹಾಗೂ ಮಳೆ ಕೊರತೆಯಿಂದ ಈ ಬಾರಿ ಜಿಲ್ಲೆಯಲ್ಲಿ ಹೂವಿನ ಬೆಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸ್
ಫೋಟೋ


ಗದಗ, 09 ನವೆಂಬರ್ (ಹಿ.ಸ.)

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಬರಗಾಲ ಹಾಗೂ ಮಳೆ ಕೊರತೆಯಿಂದ ಈ ಬಾರಿ ಜಿಲ್ಲೆಯಲ್ಲಿ ಹೂವಿನ ಬೆಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸ್ಥಳೀಯ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಹೆಚ್ಚಳವಾಗಿದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಹೂ ಬೆಳೆದ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗಳ ಅಲಂಕಾರ, ದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯಲ್ಲಿ ಹೂವಿನ ಕೃಷಿಗೆ ಹಿನ್ನಡೆಯಾಗಿದೆ. ನೀರಿನ ಕೊರತೆಯಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಹೂವು ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಳೀಯ ಹೂವುಗಳ ಕೊರತೆ ಎದುರಾಗಿದೆ ಎಂದು ಹೂವಿನ ವ್ಯಾಪಾರಸ್ಥರ ಭಾಷಾಸಾಬ್ ತಿಳಿಸಿದ್ದಾರೆ.

ಬೇಡಿಕೆಗೆ ತಕ್ಕಂತೆ ಹೂವು ಪೂರೈಕೆಯಾಗದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಹೂವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿ, ಸಂಬಾಪೂರ, ಪಾಪನಾಶಿ ತಾಂಡಾ, ಕದಂಪೂರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹೂವಿನ ಕೃಷಿ ಮಾಡಲಾಗುತ್ತದೆ. ಆದರೆ ಬರಗಾಲದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್ವೆಲ್ ಮೂಲಕ ನೀರಾವರಿ ಮಾಡುತ್ತಿದ್ದ ರೈತರಿಗೂ ಸಂಕಷ್ಟ ಎದುರಾಗಿದೆ. ನೀರಿನ ಕೊರತೆಯಿಂದ ಹೂವಿನ ಇಳುವರಿ ಕಡಿಮೆಯಾಗಿದ್ದು, ಕೆಲವು ರೈತರು ತೋಟಗಳನ್ನು ನಾಶಪಡಿಸುವ ಪರಿಸ್ಥಿತಿ ಎದುರಿಸಿದ್ದಾರೆ.

ಸದ್ಯ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಪ್ರತಿ ಕೆ.ಜಿ.ಗೆ 100ರಿಂದ 300 ರೂ., ಚೆಂಡು ಹೂವು 100ರಿಂದ 200 ರೂ. ಹಾಗೂ ಮಲ್ಲಿಗೆ 800ರಿಂದ 1,000 ರೂ.ವರೆಗೆ ಮಾರಾಟವಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಲ್ಪ ಪ್ರಮಾಣದಲ್ಲಿ ಹೂ ಬೆಳೆದ ರೈತರಿಗೆ ಉತ್ತಮ ಆದಾಯ ದೊರೆಯುತ್ತಿದೆ ಎಂದು ಹೂ ಬೆಳೆದ ರೈತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬರಗಾಲದಿಂದ ಹೂವಿನ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದರೂ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದು ಹೂ ಬೆಳೆದ ರೈತರಿಗೆ ಕೊಂಚ ನೆಮ್ಮದಿ ತಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande