ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತ:ಆರ್.ಅಶೋಕ
ಬೆಂಗಳೂರು, 09 ನವೆಂಬರ್ (ಹಿ.ಸ.): ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಗತ್ಯವಾದ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತವೇ ಎಂದು ವಿಧಾನಸಭೆ ಪ್ರತಿಪಕ್ಷ ನ
ಅಶೋಕ್ ಸಂಗ್ರಹ ಚಿತ್ರ


ಬೆಂಗಳೂರು, 09 ನವೆಂಬರ್ (ಹಿ.ಸ.):

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಗತ್ಯವಾದ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತವೇ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ, ರೈತರಿಗೆ ನೆರವಿಲ್ಲ, ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಇದೀಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಊಟ ಒದಗಿಸಲೂ ಸರ್ಕಾರದ ಬಳಿ ಹಣವಿಲ್ಲವೇ ಎಂದು ಟೀಕಿಸಿದ್ದಾರೆ.

ಸರ್ಕಾರಿ ಶಾಲೆಗಳ ಮಕ್ಕಳ ಹಸಿವು ನೀಗಿಸಬೇಕಾದ ಅಕ್ಷರ ದಾಸೋಹ ಯೋಜನೆಯೇ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಬಲಿಯಾಗಿದೆ ಎಂದು ಆರೋಪಿಸಿದ್ದಾರೆ.

ಅಕ್ಕಿ ಪೂರೈಕೆಯಲ್ಲಿ ವ್ಯತ್ಯಯ

ಹಣ ಪಾವತಿ ವ್ಯವಸ್ಥೆಯ ತಾಂತ್ರಿಕ ದೋಷ ಹಾಗೂ ಎಸ್‌ಎನ್‌ಎಸ್ ಸ್ಪರ್ಶ್ ವ್ಯವಸ್ಥೆಯಲ್ಲಿನ ವಿಳಂಬದಿಂದ ಶಾಲೆಗಳಿಗೆ ಅಕ್ಕಿ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಮಕ್ಕಳಿಗೆ ಊಟ ಬಡಿಸಲು ಅಕ್ಕಿಯಿಲ್ಲದೆ ಮುಖ್ಯಶಿಕ್ಷಕರು ಪಕ್ಕದ ಶಾಲೆಗಳಿಂದ ಅಕ್ಕಿಯನ್ನು ಎರವಲು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಬೇಳೆ, ಎಣ್ಣೆಯೂ ಇಲ್ಲ

ಕಳೆದ 8ರಿಂದ 10 ದಿನಗಳಿಂದ ಹಲವು ಶಾಲೆಗಳಿಗೆ ಬಿಸಿಯೂಟ ತಯಾರಿಸಲು ಅಗತ್ಯವಾದ ಅಡುಗೆ ಎಣ್ಣೆ ಮತ್ತು ಬೇಳೆ ಪೂರೈಕೆಯಾಗಿಲ್ಲ. ಶಾಲೆಗಳ ಅಡುಗೆ ಕೋಣೆಗಳಲ್ಲಿನ ದಾಸ್ತಾನು ಖಾಲಿಯಾಗಿದ್ದು, ಮಕ್ಕಳಿಗೆ ಊಟ ಸಿದ್ಧಪಡಿಸುವುದೇ ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಕರ ಜೇಬಿನಿಂದ ದಿನಸಿ ಖರೀದಿ

ಸರ್ಕಾರ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಹೊರಬೇಕಾದ ಪರಿಸ್ಥಿತಿ ಎದುರಾಗಿದೆ. ಮಕ್ಕಳಿಗೆ ಊಟ ತಪ್ಪಬಾರದೆಂಬ ಕಾರಣಕ್ಕೆ ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಿ, ಸ್ಥಳೀಯ ಅಂಗಡಿಗಳಲ್ಲಿ ಸಾಲ ಪಡೆದು ದಿನಸಿ ಖರೀದಿಸಿ ಬಿಸಿಯೂಟ ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಠ ಮಾಡಬೇಕಾದ ಶಿಕ್ಷಕರು ಅಕ್ಕಿ, ಬೇಳೆ ಮತ್ತು ಎಣ್ಣೆಗಾಗಿ ಅಲೆದಾಡುವಂತಾಗಿದೆ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಅಕ್ಕಿ ಎರವಲು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವೈಫಲ್ಯದ ಪರಮಾವಧಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತಿಗೆ ಹಣವಿದೆ, ಮಕ್ಕಳ ಊಟಕ್ಕಿಲ್ಲವೇ?

ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರಕ್ಕೆ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಊಟ ಒದಗಿಸಲು ಹಣವಿಲ್ಲವೇ? ಜಾಹೀರಾತುಗಳಿಗೆ ಇರುವ ಹಣ ಮಕ್ಕಳ ಅನ್ನದ ವಿಚಾರ ಬಂದಾಗ ಏಕೆ ಮಾಯವಾಗುತ್ತದೆ ಎಂದು ಆರ್. ಅಶೋಕ ಪ್ರಶ್ನಿಸಿದ್ದಾರೆ.

ಒಂದೆಡೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡುವ ಸರ್ಕಾರ, ಮತ್ತೊಂದೆಡೆ ಅದೇ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಗದ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದ್ದಾರೆ.

ಇದು ಕೇವಲ ಅಕ್ಕಿ, ಬೇಳೆ ಮತ್ತು ಎಣ್ಣೆಯ ಕೊರತೆಯಲ್ಲ. ಬಡ ಮಕ್ಕಳ ಶಿಕ್ಷಣ, ಪೌಷ್ಟಿಕತೆ ಮತ್ತು ಭವಿಷ್ಯದ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಪ್ರತಿಬಿಂಬವಾಗಿದೆ ಎಂದು ಆರೋಪಿಸಿದ್ದಾರೆ.

ತಕ್ಷಣವೇ ಶಾಲೆಗಳಿಗೆ ಅಗತ್ಯವಿರುವ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು. ಪಾವತಿ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಶಿಕ್ಷಕರ ಮೇಲಿನ ಹೆಚ್ಚುವರಿ ಹೊರೆ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಖಾತರಿಪಡಿಸುವ ಜವಾಬ್ದಾರಿಯೂ ಇದೆ. ಯಾವುದೇ ಸರ್ಕಾರ ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿದುಕೊಳ್ಳುವಷ್ಟು ನಿರ್ದಯವಾಗಬಾರದು ಎಂದು ಆರ್. ಅಶೋಕ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande