ಸ್ಟಿಂಗ್ ಆಪರೇಷನ್ ಪ್ರಕರಣ: ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಮೊಬೈಲ್, ಲ್ಯಾಪ್ಟಾಪ್ ಸಮೇತ ವಿಚಾರಣೆಗೆ ಹಾಜರಾಗಲು ಸೂಚನೆ
CCB-Notice-to-Krupa-Alva-in-Siddaramaiah-Sting-Operation-Case


ಬೆಂಗಳೂರು, 09 ನವೆಂಬರ್ (ಹಿ.ಸ.):

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿರುವ ಕೃಪಾ ಆಳ್ವಾ ಅವರಿಗೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ನವೆಂಬರ್ 9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಪೊಲೀಸರು, ತಾವು ಬಳಸುವ ಮೊಬೈಲ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ತರುವಂತೆ ನಿರ್ದೇಶಿಸಿದ್ದಾರೆ.

ಬಿಎನ್ಎಸ್ನ ಸೆಕ್ಷನ್ 35(ಎ) ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿದೆ.

ಪೂರ್ವನಿಗದಿತ ಪ್ರವಾಸದ ಹಿನ್ನೆಲೆಯಲ್ಲಿ ಕೃಪಾ ಆಳ್ವಾ ವಿದೇಶಕ್ಕೆ ತೆರಳಿದ್ದರು. ನವೆಂಬರ್ 7ರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿದ್ದರು.

ಈ ಹಿಂದೆ ಸಿಸಿಬಿ ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ (ಎಲ್ಒಸಿ) ಜಾರಿಗೊಳಿಸಿದ್ದರು. ಹೀಗಾಗಿ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಅವರನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಸಿಸಿಬಿ ಇನ್ಸ್ಪೆಕ್ಟರ್ ಸತೀಶ್ ಅವರ ತಂಡ ಕೃಪಾ ಆಳ್ವಾ ಅವರನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ದಿತ್ತು. ಈ ವೇಳೆ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿರುವುದಾಗಿ ಅವರ ಪರ ವಕೀಲರು ನ್ಯಾಯಾಲಯದ ಆದೇಶದ ಪ್ರತಿಯನ್ನು ಸಲ್ಲಿಸಿದ್ದರು. ನಂತರ ಅವರನ್ನು ವಕೀಲರು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು.

ಈಗಾಗಲೇ ಮಧ್ಯಂತರ ಜಾಮೀನು ಪಡೆದಿರುವ ಕೃಪಾ ಆಳ್ವಾ ಈ ಹಿಂದೆ ಸಿಸಿಬಿ ಕಚೇರಿಗೆ ವಿಚಾರಣೆಗೆ ತೆರಳಿದ್ದರು. ಆದರೆ, ಅಂದು ಹೇಳಿಕೆ ದಾಖಲಿಸಲು ಸಿಬ್ಬಂದಿ ಲಭ್ಯವಿಲ್ಲದ ಕಾರಣ ಮತ್ತೊಂದು ದಿನ ಬರುವಂತೆ ಪೊಲೀಸರು ಸೂಚಿಸಿದ್ದರು ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಕ್ಷೇಪಾರ್ಹ ಸ್ಟಿಂಗ್ ವಿಡಿಯೋ ಪ್ರಸಾರ ಪ್ರಕರಣದ ತನಿಖೆಯನ್ನು ಸಿಸಿಬಿ ಮುಂದುವರಿಸಿದೆ.

ವಿಡಿಯೋ ಚಿತ್ರೀಕರಣ, ಅದರಲ್ಲಿರುವ ವ್ಯಕ್ತಿಗಳ ಪಾತ್ರ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಕಾರಣವಾದ ಅಂಶಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಕುರಿತು ತನಿಖೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕೃಪಾ ಆಳ್ವಾ ಅವರ ಮೊಬೈಲ್ ಮತ್ತು ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಪರಿಶೀಲನೆ ಮಹತ್ವ ಪಡೆದುಕೊಂಡಿದೆ.

ಸಿಸಿಬಿ ತನಿಖೆಯ ಮೂಲಕ ಪ್ರಕರಣದ ಹಿಂದಿರುವ ವ್ಯಕ್ತಿಗಳ ಪಾತ್ರ ಹಾಗೂ ವಿಡಿಯೋ ಸೃಷ್ಟಿ ಮತ್ತು ಪ್ರಸಾರದ ಹಿಂದಿನ ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande