ಗುಡಿಸಲು ವಾಸಿಗೆ ಸ್ವಂತ ಮನೆ ಭಾಗ್ಯ:ಹಕ್ಕು ಪತ್ರ ವಿತರಿಸಿದ ಎಚ್.ಕೆ.ಪಾಟೀಲ
ಗದಗ, 09 ನವೆಂಬರ್ (ಹಿ.ಸ.) ಕಳೆದ 65 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹಾಗೂ ರೈಲ್ವೆ ಮೇಲ್ಸೇತುವೆ ತೆರವು ಕಾರ್ಯಾಚರಣೆಯಿಂದ ಸೂರು ಕಳೆದುಕೊಂಡಿದ್ದ ಮಹಿಳೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಶಾಸಕ ಎಚ್.ಕೆ. ಪಾಟೀಲ ಅವರು ಸ್ವಂತ ಮನೆಯ ಹಂಚಿಕೆ ಪತ್ರ ವಿತರಿಸಿದರು. ಗದಗ ನಗರದ ಸ್ಟೇಷನ್ ರಸ್ತ
ಫೋಟೋ


ಗದಗ, 09 ನವೆಂಬರ್ (ಹಿ.ಸ.)

ಕಳೆದ 65 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹಾಗೂ ರೈಲ್ವೆ ಮೇಲ್ಸೇತುವೆ ತೆರವು ಕಾರ್ಯಾಚರಣೆಯಿಂದ ಸೂರು ಕಳೆದುಕೊಂಡಿದ್ದ ಮಹಿಳೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಶಾಸಕ ಎಚ್.ಕೆ. ಪಾಟೀಲ ಅವರು ಸ್ವಂತ ಮನೆಯ ಹಂಚಿಕೆ ಪತ್ರ ವಿತರಿಸಿದರು.

ಗದಗ ನಗರದ ಸ್ಟೇಷನ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗಡೆ ಜೋಪಡಿ ನಿರ್ಮಿಸಿಕೊಂಡು ಖೈರುನ್ನಿಸಾ ಎಸ್. ಶೇಖ್ ಅತ್ತಾರ ಅವರು ಕಳೆದ 65 ವರ್ಷಗಳಿಂದ ವಾಸಿಸುತ್ತಿದ್ದರು. ಮೇಲ್ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯವರು ಜೋಪಡಿಯನ್ನು ತೆರವುಗೊಳಿಸಿದ್ದರು. ಇದರಿಂದ ಅವರು ವಾಸಕ್ಕೆ ಸೂರು ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿತ್ತು.

ಈ ಹಿಂದೆ 2022ರ 'ಮನೆ ಇಲ್ಲದವರಿಗೆ ಮನೆ' ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಮನೆ ಮಂಜೂರಾಗಿರಲಿಲ್ಲ. ಇದೀಗ ಪ್ರಧಾನಮಂತ್ರಿ ಆವಾಸ್ ಯೋಜನೆಯ 3630 (ಜಿ+1) ಗುಂಪು ವಸತಿ ಯೋಜನೆಯಡಿ ಹಂಚಿಕೆಗೆ ಬಾಕಿ ಉಳಿದಿರುವ 760 ಮನೆಗಳ ಪೈಕಿ ಬ್ಲಾಕ್ ನಂ. 32ರ ಮೊದಲ ಮಹಡಿಯ ಮನೆ ನಂ. 01 ಅನ್ನು ಖೈರುನ್ನಿಸಾ ಅವರಿಗೆ ಫಲಾನುಭವಿಯಾಗಿ ಆಯ್ಕೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ನಗರದ ನಗರಸಭೆ ಆವರಣದಲ್ಲಿ ಶಾಸಕ ಎಚ್.ಕೆ. ಪಾಟೀಲ ಅವರು ಮಹಿಳೆಗೆ ಮನೆ ಹಂಚಿಕೆ ಪತ್ರ ವಿತರಿಸಿದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ವಂತ ಮನೆಯ ಕನಸು ನನಸಾಗಿರುವುದು ಮಹಿಳೆಯ ಕುಟುಂಬದಲ್ಲಿ ಸಂತಸ ಮೂಡಿಸಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಬರಕತ್ಅಲಿ ಮುಲ್ಲಾ, ಇಮ್ತಿಯಾಜ್ ಶಿರಹಟ್ಟಿ, ಖಮರಸುಲ್ತಾನ್ ನಮಾಜಿ, ಪರ್ವೀನಬಾನು ಮುಲ್ಲಾ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ಎನ್. ಬಳ್ಳಾರಿ, ಸಯ್ಯದ್ ಖಾಲಿದ ಕೊಪ್ಪಳ ಹಾಗೂ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande