
ಬೆಂಗಳೂರು, 08 ನವೆಂಬರ್ (ಹಿ.ಸ.):
ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಉತ್ತೇಜನ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಉತ್ಪಾದನೆಯಾದ ಶೇ.20ರಿಂದ 30ರಷ್ಟು ಎಥೆನಾಲ್ ಅನ್ನೂ ಖರೀದಿಸುತ್ತಿಲ್ಲ. ಇದರ ಹಿಂದೆ ಅವ್ಯವಹಾರ ನಡೆದಿದೆ ಎಂಬ ರಾಹುಲ್ ಗಾಂಧಿ ಹಾಗೂ ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪದಲ್ಲಿ ಸತ್ಯಾಂಶವಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಗೊಂದಲಮಯಗೊಳಿಸಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ತನ್ನ ಇಚ್ಛೆಯಂತೆ ಇ-10, ಇ-20, ಇ-30 ಎಂದು ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಘೋಷಿಸುತ್ತಿದೆ. ಮೊದಲು ಎಥೆನಾಲ್ ಉತ್ಪಾದನೆ ಮಾಡುವಂತೆ ಸೂಚಿಸಿದ ಬಳಿಕ ಉತ್ಪಾದನೆಯಾದ ಎಥೆನಾಲ್ ಖರೀದಿಸುವ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಆದರೆ, ಈಗ ಶೇ.20ರಿಂದ 30ರಷ್ಟು ಉತ್ಪಾದಿತ ಎಥೆನಾಲ್ ಅನ್ನೂ ಖರೀದಿಸುತ್ತಿಲ್ಲ. ಇದರಿಂದ ಕೈಗಾರಿಕೆಗಳು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ ಎಂದು ಹೇಳಿದರು.
ಪೆಟ್ರೋಲ್ಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಸಬೇಕು ಎಂಬ ರಾಹುಲ್ ಗಾಂಧಿ ಅವರ ಆಗ್ರಹ ನ್ಯಾಯಯುತವಾಗಿದೆ. ಆರೋಪಗಳನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಪ್ರವೃತ್ತಿಯನ್ನೇ ಹೊಂದಿಲ್ಲ ಎಂದು ಟೀಕಿಸಿದರು.
ಎಥೆನಾಲ್ ಮಿಶ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿದೆ. ಈ ಕುರಿತು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.