ಕಬ್ಬಿಗೆ ಸೂಕ್ತ ದರ ನಿಗದಿಗೆ ಪಟ್ಟು: ವಿಜಯಪುರ ರೈತರ ಸಭೆಯಲ್ಲಿ ತೀವ್ರ ಚರ್ಚೆ
ವಿಜಯಪುರ, 08 ನವೆಂಬರ್ (ಹಿ.ಸ.) ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಬೇಕು ಹಾಗೂ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದೇ ದರವನ್ನು ಘೋಷಿಸಬೇಕು ಎಂದು ಆಗ್ರಹಿಸಿ ವಿಜಯಪುರದಲ್ಲಿ ರೈತರು ಮತ್ತು ರೈತ ಮುಖಂಡರು ಸಭೆಯಲ್ಲಿ ತೀವ್ರ ಒತ್ತಾಯ ವ್ಯಕ್ತಪಡಿಸಿದರು. ನಗರದ ಜಿಲ್
ರೈತರ ಸಭೆ


ವಿಜಯಪುರ, 08 ನವೆಂಬರ್ (ಹಿ.ಸ.)

ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಬೇಕು ಹಾಗೂ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದೇ ದರವನ್ನು ಘೋಷಿಸಬೇಕು ಎಂದು ಆಗ್ರಹಿಸಿ ವಿಜಯಪುರದಲ್ಲಿ ರೈತರು ಮತ್ತು ರೈತ ಮುಖಂಡರು ಸಭೆಯಲ್ಲಿ ತೀವ್ರ ಒತ್ತಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ರೈತರು, ಜಿಲ್ಲೆಯ ಒಟ್ಟು 10 ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಒಂದೇ ದರವನ್ನು ನಿಗದಿಪಡಿಸಬೇಕು. ಕಾರ್ಖಾನೆಯಿಂದ ಕಾರ್ಖಾನೆಗೆ ವಿಭಿನ್ನ ದರ ನೀಡುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಎಲ್ಲ ಕಾರ್ಖಾನೆಗಳ ಮಾಲೀಕರು ಒಮ್ಮತದ ನಿರ್ಧಾರ ಕೈಗೊಂಡು ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೃಷ್ಣಾ ನದಿ ತೀರದ ಎರಡು ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಭೀಮಾ ನದಿ ತೀರದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3,200 ದರ ನೀಡುವುದಾಗಿ ತಮ್ಮ ನಿಲುವು ವ್ಯಕ್ತಪಡಿಸಿರುವುದು ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೈತರು, ಜಿಲ್ಲೆಯ ಎಲ್ಲ ಕಾರ್ಖಾನೆಗಳಿಗೂ ಒಂದೇ ದರ ಅನ್ವಯವಾಗಬೇಕು. ಕೃಷ್ಣಾ ನದಿ ತೀರದ ರೈತರಿಗೆ ಒಂದು ದರ, ಭೀಮಾ ನದಿ ತೀರದ ರೈತರಿಗೆ ಮತ್ತೊಂದು ದರ ನೀಡುವುದು ಸರಿಯಲ್ಲ. ಕಬ್ಬು ಬೆಳೆದಿರುವ ರೈತರ ಶ್ರಮ ಮತ್ತು ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ನ್ಯಾಯಯುತ ದರ ನೀಡಬೇಕು ಎಂದು ಒತ್ತಾಯಿಸಿದರು.

ಒಂದೇ ದರ ಇಲ್ಲದಿದ್ದರೆ ಕಾರ್ಖಾನೆ ಆರಂಭ ಬೇಡ!

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದೇ ದರ ಘೋಷಣೆ ಮಾಡದಿದ್ದರೆ ಕಾರ್ಖಾನೆಗಳ ಕಬ್ಬು ನುರಿಸುವ ಹಂಗಾಮು ಆರಂಭಿಸುವುದೇ ಬೇಡ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆ ಮಾಲೀಕರು ಒಮ್ಮತದ ನಿರ್ಧಾರಕ್ಕೆ ಬರಬೇಕು. ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳೂ ಸಭೆಯಲ್ಲಿ ಕೇಳಿಬಂದವು.

ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ದರ ನಿಗದಿ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.

ನಂತರ ಜಿಲ್ಲಾಡಳಿತದ ಅಧಿಕಾರಿಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರು ಪ್ರತ್ಯೇಕವಾಗಿ ಗೌಪ್ಯ ಸಭೆ ನಡೆಸಿದರು. ಈ ಸಭೆಯಲ್ಲಿ ಕಬ್ಬಿನ ದರದ ಕುರಿತು ಮತ್ತಷ್ಟು ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವ ಪ್ರಯತ್ನ ಮಾಡಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande