ಇಂಡಿ ಶಾಖಾ ಕಾಲುವೆಗೆ ನೀರು ಹರಿಸಲು ಅಗತ್ಯ ಕ್ರಮ: ಶಾಸಕ ವಿಠಲ್ ಕಟಕದೊಂಡ
ವಿಜಯಪುರ, 08 ನವೆಂಬರ್ (ಹಿ.ಸ.) ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವ ಕುರಿತು ಶಾಸಕ ವಿಠಲ್ ಕಟಕದೊಂಡ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿ, ಕಾಲುವೆಯ ಆರಂಭದಿಂದ ಕೊನೆಯ ಭಾಗದವರೆಗೂ ಪ್ರತಿಯೊಬ್ಬ ರೈತರಿಗೂ ಸಮರ್ಪಕವಾಗಿ ನೀರು
ಅಭಿವುಧಿ


ವಿಜಯಪುರ, 08 ನವೆಂಬರ್ (ಹಿ.ಸ.)

ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವ ಕುರಿತು ಶಾಸಕ ವಿಠಲ್ ಕಟಕದೊಂಡ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿ, ಕಾಲುವೆಯ ಆರಂಭದಿಂದ ಕೊನೆಯ ಭಾಗದವರೆಗೂ ಪ್ರತಿಯೊಬ್ಬ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಲುವೆ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಸಮಾನ ಹಂಚಿಕೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಇಂಡಿ ಶಾಖಾ ಕಾಲುವೆಯ ಮೂಲಕ ಹರಿಸುವ ನೀರು ಕೇವಲ ಆರಂಭಿಕ ಭಾಗದ ರೈತರಿಗೆ ಮಾತ್ರ ಸೀಮಿತವಾಗದೆ, ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೂ ಸಮರ್ಪಕವಾಗಿ ತಲುಪಬೇಕು ಎಂಬುದು ತಮ್ಮ ಪ್ರಮುಖ ಆಶಯವಾಗಿದೆ ಎಂದು ಶಾಸಕ ವಿಠಲ್ ಕಟಕದೊಂಡ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕಾಲುವೆಯ ನೀರಿನ ಹರಿವಿನ ಪ್ರಮಾಣ, ನೀರು ಪೂರೈಕೆಯ ವ್ಯವಸ್ಥೆ ಹಾಗೂ ವಿತರಣೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ನೀರು ಹರಿಸುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾಲುವೆಯ ಪ್ರತಿಯೊಂದು ಹಂತದಲ್ಲಿಯೂ ನೀರಿನ ಹರಿವಿನ ಮೇಲೆ ನಿಗಾ ಇರಿಸಿ, ಟೇಲ್ ಎಂಡ್ ಭಾಗದ ರೈತರಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರೈತರ ಸಹಕಾರ ಅಗತ್ಯ

ಕಾಲುವೆಯ ಆರಂಭದಿಂದ ಕೊನೆಯ ಭಾಗದವರೆಗೂ ಪ್ರತಿಯೊಬ್ಬ ರೈತರಿಗೂ ಸಮಾನವಾಗಿ ನೀರು ದೊರೆಯಬೇಕು ಎಂದರೆ ರೈತರ ಪರಸ್ಪರ ಸಹಕಾರವೂ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈತ ಬಾಂಧವರು ಸಹನೆ, ಜವಾಬ್ದಾರಿ ಹಾಗೂ ಪರಸ್ಪರ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದೆ, ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಶೇಷವಾಗಿ ಕಾಲುವೆಯ ಮೇಲ್ಭಾಗದ ರೈತರು ನೀರಿನ ಬಳಕೆಯಲ್ಲಿ ಜವಾಬ್ದಾರಿ ವಹಿಸುವ ಮೂಲಕ ಕೆಳಭಾಗದ ರೈತರಿಗೂ ನೀರು ತಲುಪಲು ಸಹಕರಿಸಬೇಕು. ನೀರಿನ ಸಮಾನ ಹಂಚಿಕೆಯಿಂದ ಮಾತ್ರ ಎಲ್ಲ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಸಾಧ್ಯ ಎಂದು ತಿಳಿಸಿದರು.

ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೀರಿನ ವ್ಯವಸ್ಥೆ ಕಲ್ಪಿಸುವುದು ತಮ್ಮ ಆದ್ಯತೆಯಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೃಷಿ ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಿಸಲಾಗುವುದು ಎಂದು ಶಾಸಕ ವಿಠಲ್ ಕಟಕದೊಂಡ ತಿಳಿಸಿದ್ದಾರೆ.

'ರೈತರ ಹಿತವೇ ನಮ್ಮ ಸಂಕಲ್ಪ, ಕೃಷಿಯ ಅಭಿವೃದ್ಧಿಯೇ ನಮ್ಮ ಗುರಿ. ಕಾಲುವೆಯ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವುದು ನಮ್ಮ ಆದ್ಯತೆ' ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande