ನ.12ರಂದು ಸಚಿವ ಡಾ. ಅಜಯ್ ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ 2ನೇ ಕ್ವಾಂಟಮ್ ಕಾರ್ಯಪಡೆ ಸಭೆ
ಬೆಂಗಳೂರು, 08 ನವೆಂಬರ್ (ಹಿ.ಸ.): ಕರ್ನಾಟಕದ ಕ್ವಾಂಟಮ್ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕ್ವಾಂಟಮ್ ಕಾರ್ಯಪಡೆಯ ಎರಡನೇ ಸಭೆ ನವೆಂಬರ್ 12ರಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ
ನ.12ರಂದು ಸಚಿವ ಡಾ. ಅಜಯ್ ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ 2ನೇ ಕ್ವಾಂಟಮ್ ಕಾರ್ಯಪಡೆ ಸಭೆ


ಬೆಂಗಳೂರು, 08 ನವೆಂಬರ್ (ಹಿ.ಸ.):

ಕರ್ನಾಟಕದ ಕ್ವಾಂಟಮ್ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕ್ವಾಂಟಮ್ ಕಾರ್ಯಪಡೆಯ ಎರಡನೇ ಸಭೆ ನವೆಂಬರ್ 12ರಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಭೆಯಲ್ಲಿ ರಾಜ್ಯದ ಕ್ವಾಂಟಮ್ ನಗರ ಯೋಜನೆ, ಸಂಶೋಧನಾ ಮೂಲಸೌಕರ್ಯ, ಕೈಗಾರಿಕಾ ಸಹಭಾಗಿತ್ವ, ನವೋದ್ಯಮಗಳಿಗೆ ಉತ್ತೇಜನ, ಪ್ರತಿಭೆ ಅಭಿವೃದ್ಧಿ, ಹೂಡಿಕೆ ಆಕರ್ಷಣೆ ಹಾಗೂ ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗಿನ ಸಹಕಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಕರ್ನಾಟಕದಲ್ಲಿ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಾದ ಸಂಶೋಧನಾ ಸಂಸ್ಥೆಗಳು, ಪ್ರತಿಭೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆ ಈಗಾಗಲೇ ಬಲಿಷ್ಠವಾಗಿದೆ. ಈ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಂಡು ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

ಕ್ವಾಂಟಮ್ ಗಣಕಯಂತ್ರ, ಕ್ವಾಂಟಮ್ ಸಂವಹನ, ಕ್ವಾಂಟಮ್ ಸಂವೇದನೆ ಮತ್ತು ಕ್ವಾಂಟಮ್ ಭದ್ರತೆ ಕ್ಷೇತ್ರಗಳಲ್ಲಿ ರಾಜ್ಯಕ್ಕಿರುವ ಅವಕಾಶಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಸಂಶೋಧನೆಯಿಂದ ವಾಣಿಜ್ಯ ಬಳಕೆಯವರೆಗೆ ಅಗತ್ಯವಾದ ವ್ಯವಸ್ಥೆ ರೂಪಿಸುವುದು ಹಾಗೂ ಉದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸುವ ಬಗ್ಗೆಯೂ ಚರ್ಚಿಸಲಾಗುವುದು.

ಕ್ವಾಂಟಮ್ ಕಾರ್ಯಪಡೆಯ ಅಧ್ಯಕ್ಷ ಪ್ರೊ. ಅರಿಂಧಮ್ ಘೋಷ್, ಕಾರ್ಯಪಡೆಯ ಸದಸ್ಯರು, ಪ್ರಮುಖ ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು, ತಜ್ಞರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಂಶೋಧನೆಗೆ ಉತ್ತೇಜನ ನೀಡುವುದಷ್ಟೇ ಅಲ್ಲದೆ, ಸಂಶೋಧನೆ, ಉದ್ಯಮ, ಹೂಡಿಕೆ ಮತ್ತು ಪ್ರತಿಭೆಯನ್ನು ಒಂದೇ ವ್ಯವಸ್ಥೆಯಡಿ ಸಂಪರ್ಕಿಸಿ ಕರ್ನಾಟಕದಲ್ಲಿ ಜಾಗತಿಕ ಮಟ್ಟದ ಕ್ವಾಂಟಮ್ ನಾವೀನ್ಯತಾ ಪರಿಸರ ವ್ಯವಸ್ಥೆ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande