
ಮಂಡ್ಯ, 08 ನವೆಂಬರ್ (ಹಿ.ಸ.):
ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ತೆರಳಿದ್ದ ಯುವಕನೊಬ್ಬ ಅಥಿತಿ ಗೃಹದ ಕೊಠಡಿಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿಯಲ್ಲಿ ನಡೆದಿದೆ.
ಹಾರೋಹಳ್ಳಿ ನಿವಾಸಿ ಅವಿನಾಶ್ (24) ಮೃತಪಟ್ಟ ಯುವಕ. ಅವಿನಾಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಆಟೋದಲ್ಲಿ ಮುತ್ತತ್ತಿಗೆ ಪ್ರವಾಸಕ್ಕೆ ತೆರಳಿದ್ದನು.
ಮೂವರೂ ಮುತ್ತತ್ತಿಯ ಪ್ರವಾಸೋದ್ಯಮ ಇಲಾಖೆಯ ಗೆಸ್ಟ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಊಟ ಮುಗಿಸಿ ಮೂವರೂ ಕೊಠಡಿಯಲ್ಲಿ ಮಲಗಿದ್ದರು ಎನ್ನಲಾಗಿದೆ.
ಆದರೆ ಬೆಳಗಾಗುವಷ್ಟರಲ್ಲಿ ಅವಿನಾಶ್ ಕೊಠಡಿಯಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಮತ್ತೊಂದೆಡೆ, ಆತನೊಂದಿಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ. ಸ್ನೇಹಿತರು ಯುವಕನ ಶವವನ್ನು ಕೊಠಡಿಯಲ್ಲೇ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಯುವಕನ ಸಾವಿನ ಹಿಂದೆ ಕೊಲೆಯಿದೆಯೇ ಅಥವಾ ಆತ್ಮಹತ್ಯೆಯೇ ಎಂಬ ಅನುಮಾನಗಳು ಮೂಡಿದ್ದು, ಇಬ್ಬರು ಸ್ನೇಹಿತರ ನಾಪತ್ತೆ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಮೃತ ಅವಿನಾಶ್ ತಂದೆ ಲೋಕೇಶ್ ನೀಡಿದ ದೂರಿನ ಮೇರೆಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸದ್ಯ ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ನಾಪತ್ತೆಯಾಗಿರುವ ಇಬ್ಬರು ಸ್ನೇಹಿತರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R