
ಹಾಸನ, 08 ನವೆಂಬರ್ (ಹಿ.ಸ.):
ಹಾಸನ ಹಾಲು ಒಕ್ಕೂಟಕ್ಕೆ 8.5 ಕೋಟಿ ರೂ. ನಷ್ಟವಾಗುತ್ತಿದೆ ಎಂಬ ಶಾಸಕ ಎಚ್.ಡಿ. ರೇವಣ್ಣ ಅವರ ಹೇಳಿಕೆ ಕುರಿತು ಕೆಎಂಎಫ್ ಕಾರ್ಯದರ್ಶಿಗಳನ್ನು ಕರೆದು ಮಾಹಿತಿ ಪಡೆಯುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಭಾನುವಾರ ಹಾಸನದ ಭುವನಹಳ್ಳಿ ಹೆಲಿಪ್ಯಾಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆ ಹೆಚ್ಚಳವಾಗಿದ್ದರೂ ಒಕ್ಕೂಟಕ್ಕೆ ನಷ್ಟವಾಗುತ್ತಿದೆ ಎಂದರೆ ಅದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಬೇಕಿದೆ ಎಂದರು.
ಬೆಲೆ ಹೆಚ್ಚಳದ ನಡುವೆಯೂ ನಷ್ಟ ಉಂಟಾಗುತ್ತಿದ್ದರೆ ಒಕ್ಕೂಟವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ವಿಚಾರಿಸುತ್ತೇನೆ. ಕೆಎಂಎಫ್ ಕಾರ್ಯದರ್ಶಿಗಳನ್ನು ಕರೆದು ನಷ್ಟದ ಕಾರಣ ಹಾಗೂ ಒಕ್ಕೂಟ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಉಳಿಯಬೇಕು. ಈ ಸಮಸ್ಯೆಯ ಬಗ್ಗೆ ತಮಗೆ ಹೊಸದಾಗಿ ಮಾಹಿತಿ ದೊರೆತಿದೆ. ಈ ವಿಚಾರದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರಷ್ಟು ತಮಗೆ ಅನುಭವವಿಲ್ಲ ಎಂದು ತಿಳಿಸಿದರು.
ಮೆಟ್ರೊ ಗುಲಾಬಿ ಮಾರ್ಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಬರಗಾಲ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳನ್ನು ಪ್ರಧಾನಿಯವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಹಾಸನಾಂಬ ದೇವಾಲಯದ ಅಭಿವೃದ್ಧಿ ಹಾಗೂ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಜಿಲ್ಲಾ ಆಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ತಮ್ಮ ಮುಂದೆ ಈವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಮೊದಲು ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಕುಂದುಕೊರತೆಗಳು ಮತ್ತು ಅಗತ್ಯಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ದೀಪಾವಳಿ ಹಬ್ಬವು ಜನರ ಬದುಕಿನಲ್ಲಿ ಬೆಳಕು ತುಂಬಲಿ ಎಂದು ಸರ್ಕಾರದ ಪರವಾಗಿ ಪ್ರಾರ್ಥಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ, ಸಂತೋಷದಿಂದ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಿರುವುದಾಗಿ ಹೇಳಿದರು. ಕಳೆದ ಬಾರಿ ಕೃಷ್ಣ ಬೈರೇಗೌಡರು ಅತ್ಯಂತ ಶಿಸ್ತಿನಿಂದ ದರ್ಶನದ ವ್ಯವಸ್ಥೆ ಮಾಡಿದ್ದರು. ಈ ಬಾರಿಯೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಬರಗಾಲದ ನಡುವೆಯೂ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.