ಪಟಾಕಿ ಎಂದು ಭಾವಿಸಿ ಮದ್ದಿಗೆ ಬೆಂಕಿ ಹಚ್ಚಿದ ಬಾಲಕ; ಭೀಕರ ಸ್ಫೋಟಕ್ಕೆ 15 ವರ್ಷದ ಬಾಲಕ ಸಾವು
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಪಟಾಕಿ ಎಂದು ಭಾವಿಸಿ ತಂದೆ ತಂದಿಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಭೀಮರಾಯ ಭೀಕರ ಸ್ಫೋಟಕ್ಕೆ ಬಲಿಯಾಗಿದ್ದಾನೆ. ಘಟನೆ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
KALABURAGI-BOY-KILLED-IN-EXPLOSION-AFTER-MISTAKING-EXPLOSIVE-FOR-FIRECRACKER


ಕಲಬುರಗಿ, 08 ನವೆಂಬರ್ (ಹಿ.ಸ.):

ದೀಪಾವಳಿ ಪಟಾಕಿ ಎಂದು ಭಾವಿಸಿ ಮನೆಯಲ್ಲಿ ತಂದಿಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನೊಬ್ಬ ಭೀಕರ ಸ್ಫೋಟಕ್ಕೆ ಬಲಿಯಾಗಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಭೀಮರಾಯ (15) ಎಂದು ಗುರುತಿಸಲಾಗಿದೆ. ಕಾಡುಹಂದಿಗಳನ್ನು ಓಡಿಸುವ ಉದ್ದೇಶದಿಂದ ಬಾಲಕನ ತಂದೆ ಮನೆಯಲ್ಲಿ ಸ್ಫೋಟಕ ಮದ್ದನ್ನು ತಂದು ಇಟ್ಟಿದ್ದರು ಎನ್ನಲಾಗಿದೆ. ಇದನ್ನು ದೀಪಾವಳಿ ಹಬ್ಬದ ಪಟಾಕಿ ಎಂದು ಭಾವಿಸಿದ ಭೀಮರಾಯ, ಅದಕ್ಕೆ ಬೆಂಕಿ ಹಚ್ಚಿದ್ದಾನೆ.

ಈ ವೇಳೆ ಕ್ಷಣಾರ್ಧದಲ್ಲೇ ಮದ್ದು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕನ ಮುಖ ಹಾಗೂ ತಲೆಗೆ ಗಂಭೀರ ಹಾನಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಗ್ರಾಮದಲ್ಲಿ ಆತಂಕ ಹಾಗೂ ದುಃಖದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.

ಘಟನೆ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande