
ಹಾಸನ, 08 ನವೆಂಬರ್ (ಹಿ.ಸ.):
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ರಷರ್ ಮಾಲೀಕರು ಹಾಗೂ ವಸತಿ ಬಡಾವಣೆಗಳ ಮಾಲೀಕರಿಂದ ಅನುಮತಿ ಮತ್ತು ಕಡತಗಳ ವಿಲೇವಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಅಕ್ರಮದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಆಪ್ತ ಸಹಾಯಕ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ಶಿವಲಿಂಗೇಗೌಡ ಅವರ ಪಾತ್ರವಿದೆ ಎಂದು ಆರೋಪಿಸಿರುವ ಅವರು, ಈ ಸಂಬಂಧ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ.
ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಾಮಾಣಿಕ ಅಧಿಕಾರಿಯೊಬ್ಬರು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಎಂಬುವವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ, ವಿವಿಧ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆಸಿದ್ದಾರೆ ಎನ್ನುವುದಕ್ಕೆ ವಾಟ್ಸಾಪ್ ಚಾಟ್ಗಳು ಸಾಕ್ಷಿಯಾಗಿವೆ ಎಂದು ಕುಮಾರಸ್ವಾಮಿ ಹೇಳಿದರು.
₹60 ಲಕ್ಷ ಲಂಚದ ವ್ಯವಹಾರದ ಆರೋಪ
ಕ್ರಷರ್ ಅನುಮತಿ ಹಾಗೂ ಜಮೀನುಗಳ ಅನ್ಯಕ್ರಾಂತಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ₹60 ಲಕ್ಷ ಲಂಚದ ಬೇಡಿಕೆ ಇಡಲಾಗಿದ್ದು, ಅದರಲ್ಲಿ ₹50 ಲಕ್ಷ ಜಿಲ್ಲಾಧಿಕಾರಿಗಳಿಗೆ ಹಾಗೂ ಉಳಿದ ಹಣವನ್ನು ಅವರ ಆಪ್ತ ಸಹಾಯಕಿ ಸಹನಾ, ವಾಹನ ಚಾಲಕ, ಗನ್ಮ್ಯಾನ್ ಮತ್ತು ಇತರ ಸಿಬ್ಬಂದಿಗೆ ಹಂಚಿಕೆ ಮಾಡುವ ಕುರಿತು ಚಾಟ್ನಲ್ಲಿ ಉಲ್ಲೇಖವಿದೆ ಎಂದು ಆರೋಪಿಸಿದರು.
ಹಾಸನ ಉಪವಿಭಾಗಾಧಿಕಾರಿ ಜಗದೀಶ್ ಅವರಿಗೆ ₹22 ಲಕ್ಷ ಹಾಗೂ ತಹಶೀಲ್ದಾರ್ ಗೀತಾ ಅವರಿಗೆ ₹13 ಲಕ್ಷ ನೀಡಿರುವ ಬಗ್ಗೆ ವಾಟ್ಸಾಪ್ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿದೆ.
ಜಿಲ್ಲಾಧಿಕಾರಿಗಳ ವರ್ಗಾವಣೆ ತಪ್ಪಿಸಲು ತಹಶೀಲ್ದಾರ್ ಸಂತೋಷ್ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ ₹75 ಲಕ್ಷ ನೀಡಲಾಗಿದೆ ಎಂಬ ಆಘಾತಕಾರಿ ಅಂಶವೂ ಚಾಟ್ನಲ್ಲಿದೆ ಎಂದು ಅವರು ದೂರಿದರು.
ಡಿಸಿ ನಿವಾಸದ ಪೊಲೀಸ್ ಕೊಠಡಿಯಲ್ಲೇ ಹಣ ಇಡುವಂತೆ ಸೂಚನೆ
ಲಂಚದ ಹಣವನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಜಿಲ್ಲಾಧಿಕಾರಿಗಳ ನಿವಾಸದ ಗೇಟ್ ಬಳಿಯ ಪೊಲೀಸ್ ಕೊಠಡಿಯಲ್ಲಿ ಇಡುವಂತೆ ವಾಟ್ಸಾಪ್ ಸಂದೇಶದಲ್ಲಿ ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ರೈತರು ತಮ್ಮ ಜಮೀನಿನ ಕಡತಗಳ ಕೆಲಸ ಮಾಡಿಸಿಕೊಳ್ಳಲು ಒಡವೆಗಳನ್ನು ಮಾರಿ ₹50 ಲಕ್ಷದವರೆಗೆ ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದ ಅಧಿಕಾರಿಯೊಬ್ಬರು ಮತ್ತೆ ಜಿಲ್ಲೆಗೆ ಬಂದು ಹಣ ವಸೂಲಿ ಮಾಡುತ್ತಿದ್ದಾರೆ ಎಂದೂ ಆರೋಪಿಸಿದರು.
ಅಧಿಕಾರಿಗಳ ಮೊಬೈಲ್ ಜಪ್ತಿಗೆ ಆಗ್ರಹ
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣದಲ್ಲಿದೆ ಎಂದು ಹೇಳುವ ಮುಖ್ಯಮಂತ್ರಿ ಅವರು, ಸರ್ಕಾರಿ ನೌಕರರು ₹10 ಲಂಚ ಕೇಳಿದರೂ ಕರೆ ಮಾಡುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಆದರೆ ಇಡೀ ಜಿಲ್ಲಾಡಳಿತವೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪ ಕೇಳಿಬಂದಿರುವಾಗ ಜನರು ಯಾರಿಗೆ ದೂರು ನೀಡಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ವಾಟ್ಸಾಪ್ ಚಾಟ್ನಲ್ಲಿ ಪ್ರಸ್ತಾಪವಾಗಿರುವ ಎಲ್ಲ ಅಧಿಕಾರಿಗಳ ಮೊಬೈಲ್ ಫೋನ್ಗಳನ್ನು ತಕ್ಷಣ ಜಪ್ತಿ ಮಾಡಿ, ವಿಧಿವತ್ತಾಗಿ ತನಿಖೆ ನಡೆಸಬೇಕು.
ಆರೋಪಗಳು ಸತ್ಯಾಸತ್ಯತೆಯ ಪರಿಶೀಲನೆಗೆ ಒಳಪಡಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಟೀಕೆ
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಟೀಕಿಸಿದ ಕುಮಾರಸ್ವಾಮಿ, ನಂದಿನಿ ಹಾಲು, ತುಪ್ಪ, ಬೆಣ್ಣೆ, ಚೀಸ್ ಹಾಗೂ ಪನ್ನೀರ್ ದರ ಹೆಚ್ಚಳದಿಂದ ಗ್ರಾಹಕರಿಗೆ ಹೊರೆ ಉಂಟಾಗಿದೆ ಎಂದರು.
ಹೈನುಗಾರರು ಮೇವಿನ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಆಗುತ್ತಿರುವ ಲಾಭ ಪಶು ಆಹಾರದ ವೆಚ್ಚವನ್ನು ಸರಿದೂಗಿಸಲು ಸಾಕಾಗುತ್ತಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಆರೋಪ
ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನೇ ರಾಜ್ಯ ಸರ್ಕಾರ ತನ್ನ ಕೊಡುಗೆಯಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ಈಡೇರಿಲ್ಲ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, ₹5,000 ಕೋಟಿ ಅನುದಾನವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬ ಆರೋಪವನ್ನೂ ಮಾಡಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ರೈತರ ಬೆಳೆಗಳು ಒಣಗುತ್ತಿವೆ. ಜಲಾಶಯಗಳಿಂದ ನೀರು ಹರಿಸುವ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ದೊರಕಿಸುವಲ್ಲಿಯೂ ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳು ವಿಫಲವಾಗಿವೆ ಎಂದು ದೂರಿದರು.
ಬಸ್ ಪ್ರಯಾಣ ದರ ಏರಿಕೆಯಿಂದ ಜನರಿಗೆ ಹೊರೆ
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆಯಿಂದ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಸಾರಿಗೆ ನಿಗಮಗಳು ಸಾಲದ ಸುಳಿಯಲ್ಲಿದ್ದು, ಅದರ ಹೊರೆಯನ್ನು ಪ್ರತಿದಿನ ಪ್ರಯಾಣಿಸುವ ಸಾರ್ವಜನಿಕರ ಮೇಲೆ ಹೇರಲಾಗುತ್ತಿದೆ ಎಂದು ಟೀಕಿಸಿದರು. ತೆರಿಗೆ ಸಂಗ್ರಹದ ಗುರಿ ಹೆಸರಿನಲ್ಲಿ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ ಎಂದರು.
ಹಾಸನಾಂಬೆ ದೇವಿಯ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ ಅವರು, ಹಾಸನಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ತಮ್ಮ ಕಾರ್ಯಕ್ರಮಗಳನ್ನು ಪ್ರಚಾರಕ್ಕೆ ಸೀಮಿತಗೊಳಿಸದೆ ಜನರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಜೆಡಿಎಸ್ನ ಹಲವು ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R