
ಕೋಲಾರ, 08 ನವೆಂಬರ್ (ಹಿ.ಸ.)
ತಾಲೂಕಿನ ವೇಮಗಲ್ ಹೋಬಳಿಯ ಪಾಡಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ವೆಂಕಟೇಶಪ್ಪ ಅವರಿಗೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್) ವತಿಯಿಂದ ₹೫ ಲಕ್ಷ ಮೊತ್ತದ ಗ್ರಾಚ್ಯುಟಿ ಚೆಕ್ ವಿತರಿಸಲಾಯಿತು.
ಚಂಜಿಮಲೆ ಡೇರಿಯಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಅವರು ನಿವೃತ್ತ ಕಾರ್ಯದರ್ಶಿ ವೆಂಕಟೇಶಪ್ಪ ಅವರಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿದರು. ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯ ಸೇವೆ ಅತ್ಯಂತ ಮಹತ್ವದ್ದಾಗಿದೆ. ಹಲವು ವರ್ಷಗಳ ಕಾಲ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗೆ ಗ್ರಾಚ್ಯುಟಿ ಸೌಲಭ್ಯ ಒದಗಿಸುವುದು ಅವರ ಸೇವೆಗೆ ಸಲ್ಲಿಸುವ ಗೌರವವಾಗಿದೆ. ಸಿಬ್ಬಂದಿಯ ಕಲ್ಯಾಣಕ್ಕೆ ಒಕ್ಕೂಟ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಹಾರ್ಜೇನಹಳ್ಳಿ ನೂತನ ಡೇರಿ ಕಟ್ಟಡ ನಿಧಿಗೆ ೧ ಲಕ್ಷ ಹಾಗೂ ಮೇವು ಕಟಾವು ಮಾಡುವ ಸಮಯದಲ್ಲಿ ಕೈಗೆ ಅಪಘಾತವಾದ ಅಮ್ಮನಲ್ಲೂರು ಗ್ರಾಮದ ಮುನಿಯಪ್ಪಗೆ ೩೦ ಸಾವಿರ ಸಹಾಯಧನ ನೀಡಿದರು.
ಕೋಮುಲ್ ವಿಸ್ತರಣಾಧಿಕಾರಿಗಳಾದ ನಾಗೇಂದ್ರ, ಸಮೀರ್ ಪಾಷ, ಚಂಜಿಮಲೆ ಡೇರಿ ಕಾರ್ಯದರ್ಶಿ ಸಿ.ಎನ್. ಪಾಪಣ್ಣ, ಹಾರ್ಜೇನಹಳ್ಳಿ ಡೇರಿ ಕಾರ್ಯದರ್ಶಿ ಹೆಚ್ ಎನ್ ರಮೇಶ್ ಕುಮಾರ್, ಮುಖಂಡರಾದ ನರಸಿಂಹಪ್ಪ, ಸಿ.ಎನ್. ಗುರುಮೂರ್ತಿ, ಮುನೇಶ್, ಕೇಶವರೆಡ್ಡಿ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್