
ಕೋಲಾರ. 08 ನವೆಂಬರ್ (ಹಿ.ಸ.)
ಅರಣ್ಯ ಭೂಮಿ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವರು ಕರೆದಿದ್ದ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಶ್ರೀನಿವಾಸಪುರ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಭೆಗೆ ಗೈರಾಗಿರುವುದಕ್ಕೆ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹರಟಿ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮವರೇ ಎಂದು ಹೇಳುವ ನೀವು, ನಿಮ್ಮ ಅಧಿಕಾರಾವಧಿಯಲ್ಲಿ ಮಂಜೂರಾಗಿ ಪ್ರಾಧಿಕಾರದಿಂದ ಹಕ್ಕುಪತ್ರವನ್ನು ಪಡೆದಿರುವ ರೈತರ ಜಮೀನುಗಳನ್ನು ಅರಣ್ಯ ಇಲಾಖೆ ತನ್ನದೆಂದು ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದರೂ ನೀವು ಯಾರ ಪರವಾಗಿ ನಿಲ್ಲುತ್ತೀದ್ದೀರಾ ಎಂದು ಪ್ರಶ್ನಿಸಿದರು.
ದಶಕಗಳಿಂದ ಭೂಮಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಲ್ಲಿ ಬಹುತೇಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಕುಟುಂಬಗಳೂ ಇವೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಕಾಪಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಬೇಕು ಅಧಿಕಾರ ಶಾಶ್ವತವಲ್ಲ, ಜನರ ವಿಶ್ವಾಸ ಮುಖ್ಯ. ಸಭೆಗೆ ಗೈರಾಗುವ ಮೂಲಕ ರೈತರಿಗೆ ಅನ್ಯಾಯ ಮಾಡಬಾರದು. ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಮಸ್ಯೆಗೆ ನ್ಯಾಯಯುತ ಪರಿಹಾರ ಕಲ್ಪಿಸಲು ಮುಂದಾಗಬೇಕಿತ್ತು ದ್ವಂದ್ವ ನಿಲುವು ಬಿಟ್ಟು ರೈತರ ಧ್ವನಿಯಾಗುವಂತೆ ಹರಟಿ ಪ್ರಕಾಶ್ ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್