
ಗದಗ, 08 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಗದಗ ನಗರದ ಎಪಿಎಂಸಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ಪೂಜೆ ಹಾಗೂ ಮನೆಗಳ ಅಲಂಕಾರಕ್ಕಾಗಿ ವಿವಿಧ ಬಗೆಯ ಹೂವುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.
ಮಾರುಕಟ್ಟೆಯೆಲ್ಲೆಡೆ ಬಣ್ಣ ಬಣ್ಣದ ಹೂವುಗಳ ರಾಶಿ ಕಂಡುಬರುತ್ತಿದ್ದು, ಖರೀದಿ ಮತ್ತು ಮಾರಾಟ ಎರಡೂ ಬಿರುಸಿನಿಂದ ಸಾಗಿವೆ.
ಈ ಬಾರಿ ಮಳೆ ಕೊರತೆಯಿಂದಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಅಭಾವದಿಂದ ಹೂವಿನ ಬೆಳೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಪರಿಣಾಮವಾಗಿ ಮಾರುಕಟ್ಟೆಗೆ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಅಲ್ಪಸ್ವಲ್ಪ ಬೆಳೆದ ಹೂವುಗಳಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಹೂವುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.
ವಿಶೇಷವಾಗಿ ಸೇವಂತಿ ಮತ್ತು ಚಂಡು ಹೂವುಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ. ಇದರೊಂದಿಗೆ ಕನಕಾಂಬರಿ, ಮಲ್ಲಿಗೆ, ಗುಲಾಬಿ, ಕಾಕಡ ಮಲ್ಲಿಗೆ, ಗಿಲಾಟೆ ಹಾಗೂ ಸುಗಂಧಿ ಹೂವುಗಳ ಖರೀದಿಯೂ ಜೋರಾಗಿದೆ.
ದೀಪಾವಳಿ ಹಬ್ಬದ ಪೂಜೆ, ದೇವರ ಅಲಂಕಾರ ಹಾಗೂ ಮನೆಗಳ ಸಿಂಗಾರಕ್ಕಾಗಿ ಗ್ರಾಹಕರು ವಿವಿಧ ಬಗೆಯ ಹೂವುಗಳನ್ನು ಖರೀದಿಸುತ್ತಿದ್ದಾರೆ.
ಕಡಿಮೆ ಇಳುವರಿ, ಉತ್ತಮ ಬೆಲೆ: ರೈತರಲ್ಲಿ ಸಂತಸ
ಮಳೆ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಹೂವು ಬೆಳೆಯಲು ಸಾಧ್ಯವಾಗದಿದ್ದರೂ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವುದು ರೈತರಲ್ಲಿ ತುಸು ಸಮಾಧಾನ ಮೂಡಿಸಿದೆ. ಕಡಿಮೆ ಪ್ರಮಾಣದ ಹೂವುಗಳಿಗೂ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರಿಗೆ ಉತ್ತಮ ಆದಾಯದ ನಿರೀಕ್ಷೆ ಇದೆ.
ಆದರೆ, ಹೂವುಗಳ ಬೆಲೆ ಏರಿಕೆಯಿಂದ ವ್ಯಾಪಾರಸ್ಥರ ಖರೀದಿ ವೆಚ್ಚವೂ ಹೆಚ್ಚಾಗಿದೆ. ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ ವಿಚಾರಿಸುತ್ತಿರುವ ಗ್ರಾಹಕರು ದುಬಾರಿ ದರ ಕಂಡು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಹೂವು ಖರೀದಿಸಬೇಕೆಂಬ ಆಸೆ ಇದ್ದರೂ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಹೊರೆಯಾಗಿದೆ.
ಒಟ್ಟಿನಲ್ಲಿ, ಮಳೆ ಕೊರತೆಯಿಂದ ಹೂವಿನ ಇಳುವರಿ ಕುಸಿದಿದ್ದರೂ ದೀಪಾವಳಿ ಹಬ್ಬದ ಬೇಡಿಕೆಯಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಚುರುಕುಗೊಂಡಿದೆ.
ರೈತರ ಮುಖದಲ್ಲಿ ಮಂದಹಾಸ ಮೂಡಿದ್ದರೆ, ಹೂವುಗಳ ಬೆಲೆ ಏರಿಕೆ ಗ್ರಾಹಕರಿಗೆ ಮಾತ್ರ ಬಿಸಿಮುಟ್ಟಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R