ಗ್ರಾಮಗಳ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದನೆ: ಶಾಸಕ ಉಮೇಶ್ ಮೇಟಿ
ಬಾಗಲಕೋಟೆ, 08 ನವೆಂಬರ್ (ಹಿ.ಸ.) ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನರ ಬಹುದಿನಗಳ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸಲಾಗುತ್ತಿದೆ. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ. ಗ್ರಾಮೀಣ ಭಾಗದ ಜನರಿಗೆ ಅಗತ್ಯ ಮೂಲಸೌಕರ್ಯ
Development


ಬಾಗಲಕೋಟೆ, 08 ನವೆಂಬರ್ (ಹಿ.ಸ.)

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನರ ಬಹುದಿನಗಳ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸಲಾಗುತ್ತಿದೆ. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ. ಗ್ರಾಮೀಣ ಭಾಗದ ಜನರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಉಮೇಶ್ ಮೇಟಿ ಹೇಳಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು ₹2.55 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮೇಶ್ ಮೇಟಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಚೌಡಾಪುರ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಈ ಕಾಮಗಾರಿಯಿಂದ ಗ್ರಾಮದ ರಸ್ತೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದ್ದು, ರೈತರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಉತ್ತಮಗೊಂಡರೆ ಕೃಷಿ ಚಟುವಟಿಕೆಗಳು ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂಬ ಆಶಯ ವ್ಯಕ್ತವಾಯಿತು.

ಇದೇ ಸಂದರ್ಭದಲ್ಲಿ ಕಿರಸೂರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅದೇ ರೀತಿ ಭಗವತಿ ಗ್ರಾಮದಲ್ಲಿ ಶ್ರೀ ಕೋಣಮ್ಮದೇವಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಯಿತು. ಈ ಕಾಮಗಾರಿಗಳಿಗೆ ಒಟ್ಟು ₹55 ಲಕ್ಷ ಅನುದಾನ ಮೀಸಲಿಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಕ್ಷೇತ್ರದ ಗ್ರಾಮೀಣ ಭಾಗದ ಜನರು ಹಲವು ವರ್ಷಗಳಿಂದ ರಸ್ತೆ, ಸಮುದಾಯ ಭವನ ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗಾಗಿ ಬೇಡಿಕೆ ಸಲ್ಲಿಸುತ್ತಿದ್ದರು. ಜನರ ಅಗತ್ಯತೆ ಹಾಗೂ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವಿವಿಧ ಯೋಜನೆಗಳಡಿ ಹಂತ ಹಂತವಾಗಿ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಅಭಿವೃದ್ಧಿಗೆ ರಸ್ತೆ ಸಂಪರ್ಕ ಅತ್ಯಂತ ಪ್ರಮುಖವಾಗಿದೆ. ಉತ್ತಮ ರಸ್ತೆಗಳು ನಿರ್ಮಾಣವಾದರೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ಸಂಚರಿಸಲು ಅನುಕೂಲವಾಗುತ್ತದೆ. ಅದೇ ರೀತಿ ಸಮುದಾಯ ಭವನಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವುದಷ್ಟೇ ಮುಖ್ಯವಲ್ಲ, ಅವುಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬರದಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರ ಹಣ ಸಮರ್ಪಕವಾಗಿ ಬಳಕೆಯಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವಂತಪ್ಪ ಮೇಟಿ ಮಾತನಾಡಿ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಸಮುದಾಯ ಸೌಲಭ್ಯಗಳ ನಿರ್ಮಾಣ ಬಹಳ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ಸಾಧ್ಯ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ಬಳಕೆಯಾಗಿ ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳ್ಳಲು ಗ್ರಾಮಸ್ಥರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿ.ಜಿ. ಮಾಗನೂರ, ಎಸ್.ಎನ್. ರಾಂಪುರ್, ಶರಣಪ್ಪ ಗುಳೇದ್, ಚಂದ್ರಶೇಖರ್ ಗುಳೇದ್, ಕಳ್ಳು ಹಳ್ಳೂರ್, ಶಿವಪ್ಪ ಕಡ್ಲಿಮಟ್ಟಿ, ಲಕ್ಷ್ಮಣ್ ದಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು, ಸಮಾಜದ ಗಣ್ಯರು ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande