
ಕೋಲಾರ,08 ನವೆಂಬರ್ (ಹಿ.ಸ.)
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಹಬ್ಬಕ್ಕೂ ಸೇವಂತಿಗೆ ಹೂವಿಗೂ ಅವಿನಾಭಾವ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಸೇವಂತಿಗೆ ಹೂವಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಹೂ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಬಯಲುಸೀಮೆಯ ಕೋಲಾರ ಜಿಲ್ಲೆ ಕೃಷಿ ಪ್ರಧಾನ ಪ್ರದೇಶವಾಗಿದೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಒಣಭೂಮಿಯ ಬೆಳೆಗಳು ಹಾನಿಗೀಡಾಗಿವೆ. ಆದರೆ ಕೊಳವೆಬಾವಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ಸೇವಂತಿಗೆ ಬೆಳೆದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಕೋಲಾರ ತಾಲ್ಲೂಕಿನ ಮತ್ತಿಕುಂಟೆ ಗ್ರಾಮದ ಪ್ರಗತಿಪರ ರೈತ ಅನಿಲ್ ಮತ್ತು ಅವರ ಸಹೋದರರು ಸೇವಂತಿಗೆ ಬೆಳೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಒಂದು ಎಕರೆ ಜಮೀನಿಗೆ ಏಳರಿಂದ ಎಂಟು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಿ, ಅಗತ್ಯ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮಿಶ್ರಣ ಮಾಡಿ ಭೂಮಿಯನ್ನು ಸಿದ್ಧಪಡಿಸುತ್ತಾರೆ. ಒಂದು ಎಕರೆಗೆ ಸುಮಾರು ಎಂಟು ಸಾವಿರ ಸಸಿಗಳನ್ನು ನಾಟಿ ಮಾಡುತ್ತಾರೆ. ಜೂನ್ ನಂತರ ನಾಟಿ ಮಾಡಿದರೆ ಒಂದು ಸಾಲಿನಲ್ಲಿ, ಡಿಸೆಂಬರ್ನಲ್ಲಿ ನಾಟಿ ಮಾಡಿದರೆ ಎರಡು ಸಾಲುಗಳಲ್ಲಿ ಸಸಿಗಳನ್ನು ನೆಡಲಾಗುತ್ತದೆ. ನಾಟಿ ಮಾಡಿದ 90 ದಿನಗಳ ನಂತರ ಹೂವಿನ ಕೊಯ್ಲು ಆರಂಭವಾಗುತ್ತದೆ. ಒಂದು ಎಕರೆಗೆ ಏಳರಿಂದ ಎಂಟು ಟನ್ ಇಳುವರಿ ನಿರೀಕ್ಷಿಸಬಹುದು ಎಂದು ಅನಿಲ್ ವಿವರಿಸಿದ್ದಾರೆ. ವಿವಿಧ ತಳಿಗಳ ಸೇವಂತಿಗೆ ಬೆಳೆಸಿರುವುದಾಗಿಯೂ ತಿಳಿಸಿದ್ದಾರೆ.
ಪಾರೇಹೊಸಹಳ್ಳಿ ಗ್ರಾಮದ ರೈತ ರವಿ ಅವರು ನಾಲ್ಕರಿಂದ ಐದು ಟನ್ ಸೇವಂತಿಗೆ ಹೂವಿನ ಇಳುವರಿ ನಿರೀಕ್ಷಿಸಿದ್ದಾರೆ. ಕೋಲಾರ ಮಾರುಕಟ್ಟೆಯಲ್ಲಿ ಹೂವು ಮಾರಾಟ ಮಾಡುತ್ತಿದ್ದು, ಇದುವರೆಗೆ ಪ್ರತಿ ಕೆ.ಜಿ.ಗೆ 200ರಿಂದ 300 ರೂ.ವರೆಗೆ ಬೆಲೆ ದೊರೆತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೇವಂತಿಗೆ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ತಿಳಿಸಿದ್ದಾರೆ.
ಕೋಲಾರ ತಾಲ್ಲೂಕಿನ ರಾಜಕಲ್ಲಹಳ್ಳಿ ಗ್ರಾಮದ ರೈತ ಶಿವಕುಮಾರ್ ಮಾತನಾಡಿ, ಮದುವೆ ಸೇರಿದಂತೆ ವಿವಿಧ ಸಮಾರಂಭಗಳ ಅಲಂಕಾರಕ್ಕೆ ಸೇವಂತಿಗೆ ಹೂವನ್ನು ಬಳಸಲಾಗುತ್ತದೆ. ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಹಾಗೂ ದೇವಾಲಯಗಳ ಪೂಜೆಯಲ್ಲಿಯೂ ಈ ಹೂವಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದರು.
ಕೋಲಾರದ ಹೂವಿನ ಮಾರುಕಟ್ಟೆಗೆ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ವ್ಯಾಪಾರಿಗಳು ಆಗಮಿಸಿ ಹೂವು ಖರೀದಿಸುತ್ತಾರೆ. ಜಿಲ್ಲೆಯ ರೈತರು ಈ ಮಾರುಕಟ್ಟೆಗೆ ಹೂವು ಪೂರೈಸುವುದರ ಜೊತೆಗೆ ಬೆಂಗಳೂರಿಗೂ ಸರಬರಾಜು ಮಾಡುತ್ತಾರೆ. ತಾವು ಬೆಳೆದ ಸೇವಂತಿಗೆ ಹೂವನ್ನು ಪ್ರತಿ ಕೆ.ಜಿ.ಗೆ 100ರಿಂದ 180 ರೂ.ವರೆಗೆ ಮಾರಾಟ ಮಾಡಿದ್ದು, ದೊರೆತ ಬೆಲೆ ಸಂತಸ ತಂದಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಕೃತಕ ಬೆಳಕಿನ ಪ್ರಯೋಗದಿಂದ ಉತ್ತಮ ಇಳುವರಿ
ಚಳಿಗಾಲದಲ್ಲಿ ಸಂಜೆ ಸೂರ್ಯ ಬೇಗನೆ ಮುಳುಗುವುದರಿಂದ ಸೇವಂತಿಗೆ ಬೆಳೆಗೆ ಅಗತ್ಯವಿರುವಷ್ಟು ಸೂರ್ಯನ ಬೆಳಕು ದೊರೆಯುವುದಿಲ್ಲ. ಇದರಿಂದ ಹೂವಿನ ಬೆಳವಣಿಗೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನು ನಿವಾರಿಸಲು ರೈತರು ತೋಟಗಳಲ್ಲಿ ವಿದ್ಯುತ್ ದೀಪಗಳ ಮೂಲಕ ರಾತ್ರಿಯಿಡೀ ಕೃತಕ ಬೆಳಕಿನ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಿಂದ ಹೂವಿನ ಗುಣಮಟ್ಟ ಸುಧಾರಿಸುವುದರ ಜೊತೆಗೆ ಇಳುವರಿಯೂ ಹೆಚ್ಚಾಗುತ್ತಿದೆ.
ಒಟ್ಟಾರೆ, ಮಳೆಯ ಕೊರತೆ ಮತ್ತು ಬರಗಾಲದ ನಡುವೆಯೂ ನೀರಾವರಿ ಸೌಲಭ್ಯ, ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಹೊಸ ಪ್ರಯೋಗಗಳ ಮೂಲಕ ಕೋಲಾರ ಜಿಲ್ಲೆಯ ರೈತರು ಸೇವಂತಿಗೆ ಬೆಳೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಹೊಸ ಕೃಷಿ ಪ್ರಯೋಗಗಳನ್ನು ಅಳವಡಿಸಿಕೊಳ್ಳುವಲ್ಲಿ ಜಿಲ್ಲೆಯ ರೈತರು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್