
ಬೆಂಗಳೂರು, 08 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಮಂಡ್ಯ ಜಿಲ್ಲೆಯ ರೈತರು ಕಾವೇರಿ ನೀರಿಗಾಗಿ ನದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬದುಕಿನಲ್ಲಿ ಬೆಳಕು ಮೂಡಿಸಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿದೆ. ರೈತರ ಬೆಳೆಗಳಿಗೆ ನೀರಿಲ್ಲದೆ, ಕುಡಿಯುವ ನೀರಿಗೂ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ರೈತರ ಹಿತಾಸಕ್ತಿಗಿಂತ ತಮಿಳುನಾಡಿನ ಮೈತ್ರಿ ರಾಜಕಾರಣವೇ ಸರ್ಕಾರಕ್ಕೆ ಮುಖ್ಯವಾಗಿದೆಯೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿರುವ ಅಶೋಕ, ವಿರೋಧ ಪಕ್ಷದಲ್ಲಿದ್ದಾಗ ಕಾವೇರಿ ವಿಚಾರವಾಗಿ ಬೀದಿಗಿಳಿದು ಪಾದಯಾತ್ರೆ ನಡೆಸಿದ್ದ ನೀವು ಅಧಿಕಾರಕ್ಕೆ ಬಂದ ಬಳಿಕ ಇದೇ ವಿಚಾರದಲ್ಲಿ ಮೌನ ವಹಿಸಿರುವುದೇಕೆ ಎಂದು ಟೀಕಿಸಿದ್ದಾರೆ.
ಅಂದು ರಾಜಕೀಯ ಅಸ್ತಿತ್ವಕ್ಕಾಗಿ ಕಾವೇರಿ ಹೋರಾಟ ನಡೆಸಿದ್ದ ನೀವು, ಇಂದು ಅಧಿಕಾರ ಉಳಿಸಿಕೊಳ್ಳಲು ಕಾವೇರಿ ಹಿತಾಸಕ್ತಿಯನ್ನೇ ಬಲಿಕೊಡುತ್ತಿದ್ದೀರಾ? ಮೂರೂವರೆ ವರ್ಷಗಳ ಕಾಲ ಜಲಸಂಪನ್ಮೂಲ ಖಾತೆಯನ್ನು ಹೊಂದಿದ್ದ ನೀವು, ಈಗ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ ರೈತರ ಹಿತ ಕಾಯುವಲ್ಲಿ ಏಕೆ ವಿಫಲರಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ಸಂಕಷ್ಟವನ್ನು ಸಮರ್ಥವಾಗಿ ಪ್ರತಿಪಾದಿಸುವ ಹೊಣೆಗಾರಿಕೆ ಸರ್ಕಾರಕ್ಕಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕಾವೇರಿ ನೀರು ಕರ್ನಾಟಕದ ಹಕ್ಕಾಗಿದ್ದು, ಅದು ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ದಾಳವಾಗಬಾರದು. ತಮಿಳುನಾಡಿಗೆ ನೀರು ಹರಿಸುವುದೇ ಸರ್ಕಾರದ ಆದ್ಯತೆಯಾದರೆ ಮಂಡ್ಯದ ರೈತರ ಬೆಳೆಗಳಿಗೆ ನೀರು ಒದಗಿಸುವವರು ಯಾರು? ಬೆಂಗಳೂರಿಗೆ ಕುಡಿಯುವ ನೀರಿನ ಭದ್ರತೆ ಕಲ್ಪಿಸುವವರು ಯಾರು? ರೈತರ ಸಂಕಷ್ಟಕ್ಕೆ ಉತ್ತರಿಸುವವರು ಯಾರು ಎಂದು ಅಶೋಕ ಪ್ರಶ್ನಿಸಿದ್ದಾರೆ.
ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಸರ್ಕಾರ ಅಧಿಕಾರ ಉಳಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಅವರು, ರಾಜ್ಯದ ಜಲಸಂಪನ್ಮೂಲಗಳ ವಾಸ್ತವ ಸ್ಥಿತಿಯನ್ನು ಪರಿಗಣಿಸಿ, ಕಾನೂನುಬದ್ಧವಾಗಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ತಮಿಳುನಾಡಿಗೆ ನೀರು ಹರಿಸುವುದನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮೊದಲು ಕರ್ನಾಟಕದ ರೈತರ ಹಿತಾಸಕ್ತಿ, ಕುಡಿಯುವ ನೀರಿನ ಭದ್ರತೆ ಮತ್ತು ರಾಜ್ಯದ ಜನರ ಹಕ್ಕುಗಳಿಗೆ ಆದ್ಯತೆ ನೀಡಬೇಕು. ಅಧಿಕಾರಕ್ಕಾಗಿ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಡುವ ರಾಜಕಾರಣವನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಆರ್. ಅಶೋಕ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.