ಬಾಗಲಕೋಟೆಯಿಂದ ತಮಿಳುನಾಡಿಗೆ 26,700 ಕ್ವಿಂಟಲ್ ಗೋವಿನಜೋಳ ರಫ್ತು
ಬಾಗಲಕೋಟೆ, 08 ನವೆಂಬರ್ (ಹಿ.ಸ.) ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಗೋವಿನಜೋಳಕ್ಕೆ ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ತಮಿಳುನಾಡಿಗೆ ಬೃಹತ್ ಪ್ರಮಾಣದಲ್ಲಿ ಗೋವಿನಜೋಳ ರವಾನೆ ಮಾಡಲಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಪ್ರಕಟಣ
ರಫ್ತು


ಬಾಗಲಕೋಟೆ, 08 ನವೆಂಬರ್ (ಹಿ.ಸ.)

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಗೋವಿನಜೋಳಕ್ಕೆ ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ತಮಿಳುನಾಡಿಗೆ ಬೃಹತ್ ಪ್ರಮಾಣದಲ್ಲಿ ಗೋವಿನಜೋಳ ರವಾನೆ ಮಾಡಲಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಬಾಗಲಕೋಟೆ ನಗರದ ಎಪಿಎಂಸಿ ವ್ಯಾಪ್ತಿಯ ವಿ.ಎನ್. ಅಥಣಿ ಗ್ರೂಪ್ ವತಿಯಿಂದ 2026ನೇ ಸಾಲಿನ ಮೊದಲ ರೈಲಿನಲ್ಲಿ ಒಟ್ಟು 26,700 ಕ್ವಿಂಟಲ್ ಗೋವಿನಜೋಳವನ್ನು ತಮಿಳುನಾಡಿನ ತಿರುಪುರಕ್ಕೆ ರಫ್ತು ಮಾಡಲಾಗಿದೆ. ಶುಕ್ರವಾರ ಸಂಜೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಈ ಮಹತ್ವದ ರವಾನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸುಮಾರು 47 ಸಾವಿರ ಪಾಕೆಟ್ಗಳಲ್ಲಿ ಸಂಗ್ರಹಿಸಲಾದ ಗೋವಿನಜೋಳವನ್ನು ವ್ಯಾಗನ್ ರೈಲಿನ ಮೂಲಕ ಸಾಗಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರೈಲಿಗೆ ವಿಶೇಷ ಪೂಜೆ ಸಲ್ಲಿಸಿ ರವಾನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ಮಹತ್ವ ಪಡೆದಿರುವ ಈ ಕಾರ್ಯವು ಬಾಗಲಕೋಟೆ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಹೊರರಾಜ್ಯಗಳಲ್ಲಿ ದೊರೆಯುತ್ತಿರುವ ಮಾರುಕಟ್ಟೆ ಅವಕಾಶವನ್ನು ಮತ್ತಷ್ಟು ಬಿಂಬಿಸಿದೆ.

ಬಾಗಲಕೋಟೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆಯಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯ ಜತೆಗೆ ಹೊರರಾಜ್ಯಗಳಲ್ಲಿಯೂ ಈ ಭಾಗದ ಗೋವಿನಜೋಳಕ್ಕೆ ಬೇಡಿಕೆ ಹೆಚ್ಚುತ್ತಿರುವುದು ರೈತರು ಹಾಗೂ ಕೃಷಿ ಉತ್ಪನ್ನಗಳ ವ್ಯಾಪಾರಿಗಳಿಗೆ ಸಂತಸ ತಂದಿದೆ. ರೈಲ್ವೆ ಸಾರಿಗೆ ಮೂಲಕ ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಿಸುವುದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವುದರ ಜತೆಗೆ ಬಾಗಲಕೋಟೆಯ ಕೃಷಿ ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆ ದೊರೆಯಲು ಸಹಕಾರಿಯಾಗಲಿದೆ.

ಸ್ಥಳೀಯ ರೈತರು ಬೆಳೆದ ಗೋವಿನಜೋಳಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಹಾಗೂ ಹೊರರಾಜ್ಯಗಳ ವ್ಯಾಪಾರ ಸಂಪರ್ಕವನ್ನು ವಿಸ್ತರಿಸುವುದು ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿ.ಎನ್. ಅಥಣಿ ಗ್ರೂಪ್ ಕೈಗೊಂಡಿರುವ ಈ ರವಾನೆ ಕಾರ್ಯ ಮಹತ್ವದ್ದಾಗಿದೆ.

ಈ ಸಂದರ್ಭದಲ್ಲಿ ವಿಶ್ವನಾಥ ಅಥಣಿ, ಬದಾಮಿಯ ಸಿದ್ದು ತೆಂಗಿನಕಾಯಿ, ಮಹೇಶ ಅಥಣಿ, ಮಹೇಶ ಅಂಗಡಿ, ಹೊಳಬಸು ರೇವಡಿಗಾರ, ಶಶಿ ಬೆಂಬಳಗಿ, ರಮೇಶ ರೇವಡಿಗಾರ, ವಿ.ಟಿ. ಗುಜ್ಜರ, ಮಲ್ಲು ಅಥಣಿ, ನಿಕೇಶ ಗುಜ್ಜರ, ಬಸವರಾಜ ತಾಳಿಕೋಟಿ, ವಿರೇಶ ಅಥಣಿ ಸೇರಿದಂತೆ ಅನೇಕ ಗಣ್ಯರು, ವ್ಯಾಪಾರಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande