
ಶಿವಮೊಗ್ಗ, 08 ನವೆಂಬರ್ (ಹಿ.ಸ.):
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2026-27ನೇ ಸಾಲಿನಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶನ ನೀಡುವ ಅರ್ಹ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆಸಕ್ತ ಕಲಾ ತಂಡಗಳು ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯ ಐಇಸಿ ವಿಭಾಗದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 17ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಕಲಾ ತಂಡಗಳು ಮತ್ತು ಕಲಾವಿದರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಜಾನಪದ ಕಲಾ ಪ್ರಕಾರದ ಹೆಸರಿನಲ್ಲಿ ತಂಡ ನೋಂದಣಿಯಾಗಿರಬೇಕು. ನೋಂದಣಿ ನವೀಕರಣದ ದಾಖಲೆ ಹಾಗೂ ತಂಡದ ಮುಖ್ಯಸ್ಥರ ಅಧಿಕೃತ ವಿಳಾಸವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಕಲಾ ತಂಡದಲ್ಲಿ ಎಂಟು ಮಂದಿ ಕಲಾವಿದರಿರಬೇಕು. ಎಲ್ಲ ಕಲಾವಿದರು 60 ವರ್ಷದೊಳಗಿನವರಾಗಿರಬೇಕು. ಕಲಾ ಪ್ರಕಾರಕ್ಕೆ ಅನುಗುಣವಾಗಿ ಸ್ವಂತ ಪ್ರಸಾಧನ ಮತ್ತು ಉಡುಪುಗಳನ್ನು ಹೊಂದಿರಬೇಕು. ಕಲಾ ತಂಡದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕಲಾವಿದರನ್ನು ಒಳಗೊಂಡಿರಬೇಕು.
ಕಚೇರಿಯಿಂದ ತಿಳಿಸಲಾಗುವ ದಿನಾಂಕದಂದು ಆಯ್ಕೆ ಸಮಿತಿಯ ಮುಂದೆ ಕಲಾ ಪ್ರದರ್ಶನ ನೀಡುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗವನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.