ವಂದೇ ಮಾತರಂ ರಚನೆಗೆ 151 ವರ್ಷ ಪೂರ್ಣ: ರಾಷ್ಟ್ರಪತಿ ದ್ರೌಪದಿ ಮುರ್ಮು, ಓಂ ಬಿರ್ಲಾ ಸೇರಿ ಗಣ್ಯರಿಂದ ಶುಭಾಶಯ
ನವದೆಹಲಿ, 07 ನವೆಂಬರ್ (ಹಿ.ಸ.): ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಗೊಂಡು 151 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಗಣ್ಯರು ಶನಿವಾರ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿ
प्रतीकात्मक


ನವದೆಹಲಿ, 07 ನವೆಂಬರ್ (ಹಿ.ಸ.):

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಗೊಂಡು 151 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಗಣ್ಯರು ಶನಿವಾರ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆ ದೇಶಭಕ್ತರಲ್ಲಿ ಧೈರ್ಯ, ಒಗ್ಗಟ್ಟು ಮತ್ತು ಸಂಕಲ್ಪದ ಸಂಕೇತವಾಗಿತ್ತು ಎಂದು ಹೇಳಿದ್ದಾರೆ. ಇಂದಿಗೂ ಈ ಗೀತೆ ಭಾರತದ ರಾಷ್ಟ್ರೀಯ ಅಸ್ಮಿತೆ, ಸ್ವಾಭಿಮಾನ ಮತ್ತು ತಾಯ್ನಾಡಿನ ಬಗೆಗಿನ ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುತ್ತದೆ. ‘ರಾಷ್ಟ್ರವೇ ಮೊದಲು’ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಆಶಿಸಿದ್ದಾರೆ.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ‘ವಂದೇ ಮಾತರಂ’ ಭಾರತ ಮಾತೆಯ ಬಗೆಗಿನ ಗೌರವ ಮತ್ತು ದೇಶಭಕ್ತಿಯ ಅಮರ ಗೀತೆಯಾಗಿದೆ. ಇದು ಭಾರತದ ರಾಷ್ಟ್ರೀಯ ಪ್ರಜ್ಞೆ, ಸ್ವಾಭಿಮಾನ ಮತ್ತು ಏಕತೆಯ ಪ್ರಬಲ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು, ಭಾರತ ಮಾತೆಯ ಪಾದಗಳಿಗೆ ಸಮರ್ಪಿತವಾದ ಈ ಪ್ರೇರಣಾದಾಯಕ ಗೀತೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶದ ಮೇಲಿನ ಅಪಾರ ಪ್ರೀತಿ ಮತ್ತು ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು, ‘ವಂದೇ ಮಾತರಂ’ ಭಾರತದ ಆತ್ಮದ ಧ್ವನಿಯಾಗಿದೆ. ಇದು ತಾಯ್ನಾಡನ್ನು ಪ್ರೀತಿಸಲು, ಅದಕ್ಕೆ ಸಮರ್ಪಿಸಿಕೊಳ್ಳಲು ಮತ್ತು ಸೇವೆ ಸಲ್ಲಿಸಲು ಎಲ್ಲರಿಗೂ ಪ್ರೇರಣೆ ನೀಡುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ, ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ತಿಳಿಸಿದ್ದಾರೆ. ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಕ್ರಾಂತಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ.

1875ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ‘ವಂದೇ ಮಾತರಂ’ ಗೀತೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶಾದ್ಯಂತ ಜನರಲ್ಲಿ ರಾಷ್ಟ್ರಪ್ರೇಮದ ಭಾವನೆ ಮೂಡಿಸಿತ್ತು. ವಿಶೇಷವಾಗಿ 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿ ಹೊರಹೊಮ್ಮಿತ್ತು. ವಿದೇಶಿ ಆಡಳಿತದ ವಿರುದ್ಧದ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದ ಈ ಘೋಷವಾಕ್ಯ ದೇಶದ ಜನರನ್ನು ಒಗ್ಗೂಡಿಸಿತ್ತು.

ಈ ಗೀತೆಯ ಪ್ರತಿಯೊಂದು ಪದವೂ ತಾಯ್ನಾಡಿನ ಬಗೆಗಿನ ಗೌರವ, ತ್ಯಾಗ, ಸಮರ್ಪಣೆ ಮತ್ತು ಹೆಮ್ಮೆಯನ್ನು ಸಾರುತ್ತದೆ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಅಸಂಖ್ಯಾತ ಕ್ರಾಂತಿಕಾರಿಗಳು ಹಾಗೂ ದೇಶವಾಸಿಗಳಿಗೆ ಈ ಗೀತೆ ಧೈರ್ಯ ತುಂಬಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande