ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿ ರಕ್ಷಣೆ: 8 ಮಂದಿ ಸುರಕ್ಷಿತ
ಮ್ಯಾನ್ಮಾರ್ ಸಮೀಪದ ಸಮುದ್ರ ಗಡಿಯಲ್ಲಿ ಕಾರ್ಯಾಚರಣೆ; ದೋಣಿಯ ದೋಷಪೂರಿತ ಇಂಧನ ಪಂಪ್ ದುರಸ್ತಿ
ಭಾರತೀಯ ಕರಾವಳಿ ರಕ್ಷಣಾ ಪಡೆಯ ಎಕ್ಸ್ ಪೋಟೋ


ನವದೆಹಲಿ, 07 ನವೆಂಬರ್ (ಹಿ.ಸ.):

ಮ್ಯಾನ್ಮಾರ್ ಸಮೀಪದ ಸಮುದ್ರ ಗಡಿಯಲ್ಲಿ ತಾಂತ್ರಿಕ ದೋಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿ ಹಾಗೂ ಅದರಲ್ಲಿದ್ದ ಎಂಟು ಮಂದಿ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ‌ ಎಂದು ಪ್ರಕಟಣೆ ತಿಳಿಸಿದೆ.

ನವೆಂಬರ್ 5ರಂದು ಈಸ್ಟ್ ಐಲ್ಯಾಂಡ್‌ನ ಉತ್ತರ ಭಾಗದಲ್ಲಿ ಮ್ಯಾನ್ಮಾರ್ ಸಮೀಪದ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ ಮೀನುಗಾರಿಕಾ ದೋಣಿಯಿಂದ ತುರ್ತು ಸಂಕೇತ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ವಿಜಯಪುರಂನಲ್ಲಿರುವ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರ ತಕ್ಷಣ ಕಾರ್ಯಾಚರಣೆ ಆರಂಭಿಸಿತು.

ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ಹಡಗು 'ರಾಜ್‌ಕಮಲ್' ಅನ್ನು ನಿಯೋಜಿಸಲಾಯಿತು. ಕರಾವಳಿ ರಕ್ಷಣಾ ಪಡೆಯ ಡಾರ್ನಿಯರ್ ವಿಮಾನದ ಸಹಕಾರದೊಂದಿಗೆ ಸಮುದ್ರದಲ್ಲಿ ದಾರಿ ತಪ್ಪಿ ನಿಂತಿದ್ದ 'ಐಎಫ್‌ಬಿ ಸಂಧ್ಯಾ ಗ್ರಾಪರ್-II' ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ ಎಂಟು ಸಿಬ್ಬಂದಿಯನ್ನು ಪತ್ತೆಹಚ್ಚಲಾಯಿತು.

ಬಳಿಕ ತಾಂತ್ರಿಕ ತಂಡವು ಸಮುದ್ರದಲ್ಲಿಯೇ ದೋಣಿಯ ದೋಷಪೂರಿತ ಇಂಧನ ಪೂರೈಕೆ ಪಂಪ್ ಅನ್ನು ದುರಸ್ತಿಗೊಳಿಸಿತು. ಇದರಿಂದ ದೋಣಿಯ ಎಂಜಿನ್ ಕಾರ್ಯಾರಂಭಿಸಿ, ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಯಿತು. ನಂತರ ದೋಣಿಯನ್ನು ಜಂಗ್ಲಿಘಾಟ್ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು.

ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಜೀವ ರಕ್ಷಣೆ ಮತ್ತು ತುರ್ತು ಸಂದರ್ಭಗಳಲ್ಲಿ ತ್ವರಿತ ನೆರವು ಒದಗಿಸುವ ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಬದ್ಧತೆಯನ್ನು ಈ ಯಶಸ್ವಿ ಕಾರ್ಯಾಚರಣೆ ಮತ್ತೊಮ್ಮೆ ಎತ್ತಿಹಿಡಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande