ಸೇನಾ ಆಧುನೀಕರಣಕ್ಕೆ ₹7.85 ಲಕ್ಷ ಕೋಟಿ ರಕ್ಷಣಾ ಬಜೆಟ್: ರಾಜನಾಥ್ ಸಿಂಗ್
ಜೈಸಲ್ಮೇರ್, 03 ನವೆಂಬರ್ (ಹಿ.ಸ.): ಜಾಗತಿಕ ಮಟ್ಟದಲ್ಲಿ ಯುದ್ಧದ ಸ್ವರೂಪ ಬದಲಾಗುತ್ತಿದ್ದು, ಭದ್ರತಾ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸೇನಾ ಆಧುನೀಕರಣ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ
केंद्रीय रक्षा मंत्री राजनाथ सिंह


ಜೈಸಲ್ಮೇರ್, 03 ನವೆಂಬರ್ (ಹಿ.ಸ.):

ಜಾಗತಿಕ ಮಟ್ಟದಲ್ಲಿ ಯುದ್ಧದ ಸ್ವರೂಪ ಬದಲಾಗುತ್ತಿದ್ದು, ಭದ್ರತಾ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸೇನಾ ಆಧುನೀಕರಣ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಮಂಗಳವಾರ ಜೈಸಲ್ಮೇರ್‌ನಲ್ಲಿ ರಕ್ಷಣಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026-27ನೇ ಆರ್ಥಿಕ ವರ್ಷದಲ್ಲಿ ದೇಶದ ರಕ್ಷಣಾ ಬಜೆಟ್ 7.85 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಸೇನಾಪಡೆಗಳ ಆಧುನೀಕರಣ ಮತ್ತು ಬಂಡವಾಳ ವೆಚ್ಚದ ಖರೀದಿಗಾಗಿ 2.19 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಷ್ಯಾ-ಉಕ್ರೇನ್ ಯುದ್ಧ ಹಾಗೂ ಇಸ್ರೇಲ್-ಇರಾನ್ ಸಂಘರ್ಷಗಳು ಆಧುನಿಕ ಯುದ್ಧದ ಬದಲಾಗುತ್ತಿರುವ ಸ್ವರೂಪವನ್ನು ಸ್ಪಷ್ಟಪಡಿಸಿವೆ. ಇಂದಿನ ಯುದ್ಧಗಳಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಜತೆಗೆ ಮಾನವರಹಿತ ವೈಮಾನಿಕ ವಾಹನಗಳು, ಕ್ಷಿಪಣಿಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ನಿಖರ ದಾಳಿ ತಂತ್ರಜ್ಞಾನಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ ಭಾರತೀಯ ಸೇನಾಪಡೆಗಳು ಇಂದಿನ ಅಗತ್ಯಗಳ ಜತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಹೇಳಿದರು.

ಸೇನೆಯ ಆಧುನೀಕರಣಕ್ಕಾಗಿ ಹಣಕಾಸು ಸಂಪನ್ಮೂಲಗಳ ಬಳಕೆ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಮಾನವ ಸಂಪನ್ಮೂಲ ಮತ್ತು ಸೇನಾ ವ್ಯವಸ್ಥೆಗಳ ಸುಧಾರಣೆಗೆ ಸರ್ಕಾರ ಒತ್ತು ನೀಡುತ್ತಿದೆ. ಕೇವಲ ಹೊಸ ಶಸ್ತ್ರಾಸ್ತ್ರಗಳ ಖರೀದಿಯಷ್ಟೇ ಅಲ್ಲದೆ, ಸೈನಿಕರ ಸಾಮರ್ಥ್ಯ, ಯುದ್ಧ ಸನ್ನದ್ಧತೆ ಮತ್ತು ತಾಂತ್ರಿಕ ಕೌಶಲವನ್ನು ಏಕಕಾಲದಲ್ಲಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.

ಭಾರತೀಯ ಸೇನೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಸೇನಾ ಘಟಕಗಳು ಬದಲಾಗುತ್ತಿರುವ ಯುದ್ಧ ತಂತ್ರಗಳಿಗೆ ಅನುಗುಣವಾಗಿವೆ. ಅಶ್ನಿ ಡ್ರೋನ್ ತುಕಡಿಗಳ ಮೂಲಕ ಕಾಲಾಳುಪಡೆಗೆ ಮಾನವರಹಿತ ವೈಮಾನಿಕ ಸಾಧನಗಳ ನೆರವಿನಿಂದ ಕಣ್ಗಾವಲು ಮತ್ತು ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಒದಗಿಸಲಾಗುತ್ತಿದೆ. ಇದರಿಂದ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ಅಗತ್ಯ ಮಾಹಿತಿಯನ್ನು ಸೇನಾ ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದರು.

ಅದೇ ರೀತಿ, ಭೈರವ್ ಬೆಟಾಲಿಯನ್‌ಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸುವ ವಿಶೇಷ ತರಬೇತಿ ಪಡೆದ ಸೇನಾ ಘಟಕಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಬದಲಾಗುತ್ತಿರುವ ಕಾರ್ಯಾಚರಣೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತ್ವರಿತವಾಗಿ ಕಾರ್ಯನಿರ್ವಹಿಸುವುದು ಇವುಗಳ ಉದ್ದೇಶವಾಗಿದೆ.

ಶಕ್ತಿಬಾಣ ರೆಜಿಮೆಂಟ್ ಪರಿಕಲ್ಪನೆಯು ಫಿರಂಗಿ ದಳದ ಸಾಮರ್ಥ್ಯವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವುದಕ್ಕೆ ಸಂಬಂಧಿಸಿದೆ. ಇದರಲ್ಲಿ ಡ್ರೋನ್‌ಗಳು, ಸಮೂಹ ಡ್ರೋನ್‌ಗಳು ಮತ್ತು ಗುರಿಯ ಮೇಲೆ ನಿಖರ ದಾಳಿ ನಡೆಸುವ ಮಾನವರಹಿತ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಿಂದ ಶತ್ರುಗಳ ನೆಲೆಗಳನ್ನು ಗುರುತಿಸುವ ಹಾಗೂ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೆಚ್ಚಲಿದೆ ಎಂದು ತಿಳಿಸಿದರು.

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿನ ಪ್ರಗತಿಯ ಬಗ್ಗೆಯೂ ಪ್ರಸ್ತಾಪಿಸಿದ ರಾಜನಾಥ್ ಸಿಂಗ್, 2014-15ನೇ ಸಾಲಿನಲ್ಲಿ ಸುಮಾರು 46,429 ಕೋಟಿ ರೂ. ಇದ್ದ ರಕ್ಷಣಾ ಉತ್ಪಾದನೆ 2025-26ನೇ ಆರ್ಥಿಕ ವರ್ಷದಲ್ಲಿ ಸುಮಾರು 1.78 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಹಲವು ಸಂಸ್ಥೆಗಳು ಕೊಡುಗೆ ನೀಡುತ್ತಿವೆ. ಸರ್ಕಾರಿ ಸಂಸ್ಥೆಗಳ ಜತೆಗೆ ಖಾಸಗಿ ಉದ್ಯಮಗಳ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಇದರಿಂದ ದೇಶೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆ ಮತ್ತು ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ಉತ್ತೇಜನ ದೊರೆಯುತ್ತಿದೆ ಎಂದರು.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ವದೇಶಿ ತಂತ್ರಜ್ಞಾನ ಸಾಮರ್ಥ್ಯ ಅತ್ಯಂತ ಅಗತ್ಯ. ಭಾರತೀಯ ಸೇನಾಪಡೆಗಳ ಅಗತ್ಯಗಳಿಗೆ ಅನುಗುಣವಾಗಿ ಉಪಕರಣಗಳನ್ನು ದೇಶದಲ್ಲೇ ತಯಾರಿಸುವ ಮೂಲಕ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ಸಂಸದೀಯ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸೇನಾ ಆಧುನೀಕರಣಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಗಂಭೀರವಾಗಿ ಪರಿಶೀಲಿಸಿ ಸಲಹೆಗಳನ್ನು ನೀಡುವಂತೆ ಸಮಿತಿ ಸದಸ್ಯರಿಗೆ ರಾಜನಾಥ್ ಸಿಂಗ್ ಮನವಿ ಮಾಡಿದರು. ಉಪಯುಕ್ತ ಸಲಹೆಗಳನ್ನು ಸಾಧ್ಯವಾದಷ್ಟು ಅನುಷ್ಠಾನಗೊಳಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ಸೋಮವಾರ ರಾಜನಾಥ್ ಸಿಂಗ್ ಅವರು ಜೈಸಲ್ಮೇರ್‌ನ ಸೇನಾ ಶಿಬಿರದಲ್ಲಿರುವ ಯುದ್ಧ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಬೆಳಕು ಮತ್ತು ಧ್ವನಿ ಪ್ರದರ್ಶನ ವೀಕ್ಷಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಸೇರಿದಂತೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande