
ನವದೆಹಲಿ, 03 ನವೆಂಬರ್ (ಹಿ.ಸ.):
ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಂಡು 82 ದಿನಗಳು ಕಳೆದಿದ್ದರೂ ಅಧಿವೇಶನವನ್ನು ಅಧಿಕೃತವಾಗಿ ಮುಂದೂಡಿಲ್ಲ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗಳನ್ನು ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವರು ಈ ವಿಚಾರವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಕ್ಷೇತ್ರ ಮರುವಿಂಗಡಣೆ ಮಸೂದೆಗಳನ್ನು ಅಂಗೀಕರಿಸುವ ಆಲೋಚನೆಯಲ್ಲಿ ಕೇಂದ್ರ ಗೃಹ ಸಚಿವರು ಇದ್ದಾರೆ. ಈ ಮಸೂದೆಗಳ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ, 2029ರ ಚುನಾವಣೆಯಲ್ಲಿ ಎದುರಾಗಬಹುದಾದ ಹಿನ್ನಡೆಯಿಂದ ಬಿಜೆಪಿಯನ್ನು ಪಾರು ಮಾಡುವುದು ಇದರ ಉದ್ದೇಶ ಎಂಬುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.
ತಮ್ಮನ್ನು ತಾವು ಚಾಣಕ್ಯ ಎಂದು ಕರೆದುಕೊಳ್ಳುವ, ಮಾತಿನ ಮೂಲಕ ಭರವಸೆ ಮೂಡಿಸುವ ಗೃಹ ಸಚಿವರು ಮತ ಕಳವು ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸಿದ್ಧವಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಕಳೆದ ವರ್ಷ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕುರಿತು ಚರ್ಚೆಗೆ ಒಗ್ಗಟ್ಟಿನ ವಿರೋಧ ಪಕ್ಷಗಳು ಒತ್ತಾಯಿಸಿದಾಗ, ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ವಿಚಾರ ಎಂದು ಹೇಳಿ ಚರ್ಚೆಗೆ ನಿರಾಕರಿಸಿದ್ದರು ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಮತ ಕಳವು ಕುರಿತು ಚರ್ಚಿಸಲು ಗೃಹ ಸಚಿವರು ನಿಜವಾಗಿಯೂ ವಿಶೇಷ ಅಧಿವೇಶನ ಕರೆಯಲು ಗಂಭೀರವಾಗಿದ್ದರೆ, ಮೊದಲು ತಮ್ಮ ಆಪ್ತರೆಂದು ಆರೋಪಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯಬೇಕು. ಅಲ್ಲದೆ, ಎಸ್ಐಆರ್ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಹೊಸ ಪ್ರಸ್ತಾವನೆಗಳನ್ನು ವಿರೋಧ ಪಕ್ಷಗಳೊಂದಿಗೆ ಮುಂಚಿತವಾಗಿಯೇ ಹಂಚಿಕೊಳ್ಳಬೇಕು. ಈ ಪ್ರಸ್ತಾವನೆಗಳ ಕುರಿತು ವಿವರವಾಗಿ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಧೈರ್ಯವನ್ನು ಗೃಹ ಸಚಿವರು ಏಕೆ ತೋರುತ್ತಿಲ್ಲ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.