ಮೊಸರಿನ ದರ ಇಳಿಕೆ ನೆಪದಲ್ಲಿ ಜನರ ಆಕ್ರೋಶಕ್ಕೆ ತೇಪೆ ಬೇಡ: ಆರ್. ಅಶೋಕ್
ಬೆಂಗಳೂರು, 03 ನವೆಂಬರ್ (ಹಿ.ಸ.): ಮೊಸರಿನ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಮಾಡುವುದಾಗಿ ಹೇಳುವ ಮೂಲಕ ಜನರ ಆಕ್ರೋಶಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಬಾರದು. ಹಾಲು ಮತ್ತು ಮೊಸರಿನ ಬೆಲೆ ಏರಿಕೆಯನ್ನು ಮರುಪರಿಶೀಲಿಸಿ, ಎರಡೂ ಉತ್ಪನ್ನಗಳ ದರವನ್ನು ಇಳಿಸಬೇಕು ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್.
ಪ್ರತಿಪಕ್ಷ ನಾಯಕ ಅಶೋಕ ಫೈಲ್ ಪೋಟೋ


ಬೆಂಗಳೂರು, 03 ನವೆಂಬರ್ (ಹಿ.ಸ.):

ಮೊಸರಿನ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಮಾಡುವುದಾಗಿ ಹೇಳುವ ಮೂಲಕ ಜನರ ಆಕ್ರೋಶಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಬಾರದು. ಹಾಲು ಮತ್ತು ಮೊಸರಿನ ಬೆಲೆ ಏರಿಕೆಯನ್ನು ಮರುಪರಿಶೀಲಿಸಿ, ಎರಡೂ ಉತ್ಪನ್ನಗಳ ದರವನ್ನು ಇಳಿಸಬೇಕು ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್ ಮೊಸರಿನ ದರವನ್ನು 14 ರೂಪಾಯಿ ಹೆಚ್ಚಳ ಮಾಡಿ, ಜನರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡುವುದಾಗಿ ಹೇಳುತ್ತಿರುವುದು ಯಾವ ರೀತಿಯ ಜನಪರ ಆಡಳಿತ ಎಂದು ಪ್ರಶ್ನಿಸಿದ್ದಾರೆ. ಮೊದಲು ವಿಪರೀತವಾಗಿ ಬೆಲೆ ಏರಿಸಿ, ಬಳಿಕ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಈಗಾಗಲೇ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ನೀಡುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ ಎಂದು ಹೇಳಿದ್ದಾರೆ.

ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ಹಾಲು ಉತ್ಪಾದಕರಿಗೆ ಸೂಕ್ತ ಪ್ರೋತ್ಸಾಹಧನ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಪ್ರೋತ್ಸಾಹಧನ ನೀಡಿ, ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ವರ್ಗಾಯಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ಅಗತ್ಯ ಪ್ರೋತ್ಸಾಹಧನವನ್ನು ಸರ್ಕಾರವೇ ಭರಿಸಬೇಕು. ರೈತರಿಗೆ ನೆರವು ನೀಡುವ ಜವಾಬ್ದಾರಿಯಿಂದ ನುಣುಚಿಕೊಂಡು ಅದರ ಹೊಣೆಯನ್ನು ಸಾಮಾನ್ಯ ಜನರ ಮೇಲೆ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ನೀರಿನ ಬಾಟಲಿ ಬೆಲೆ ಏರಿಕೆಯಾದರೆ ಯಾರೂ ಪ್ರಶ್ನಿಸುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು, ಜನರ ದಿನನಿತ್ಯದ ಅಗತ್ಯವಾದ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.

ಮೊಸರಿನ ದರದಲ್ಲಿ ಅಲ್ಪ ಇಳಿಕೆ ಸಾಕಾಗುವುದಿಲ್ಲ. ಹಾಲಿನ ದರ ಏರಿಕೆಯನ್ನೂ ಮರುಪರಿಶೀಲಿಸಿ, ಹಾಲು ಮತ್ತು ಮೊಸರಿನ ಬೆಲೆಯನ್ನು ಇಳಿಸಬೇಕು. ರೈತರಿಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹಧನ ನೀಡಿ, ಅದರ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande