ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ ಖಂಡಿಸಿದ ಭಾರತ
ನವದೆಹಲಿ, 03 ನವೆಂಬರ್ (ಹಿ.ಸ.): ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಹಡಗಿನಲ್ಲಿದ್ದ 14 ಭಾರತೀಯರ ಪೈಕಿ 13 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಗೊಂಡಿದ್ದ ಓರ್ವ ಭಾರತೀಯ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮಂಗಳವಾರ ಈ
विदेश मंत्रालय (MEA)


ನವದೆಹಲಿ, 03 ನವೆಂಬರ್ (ಹಿ.ಸ.):

ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಹಡಗಿನಲ್ಲಿದ್ದ 14 ಭಾರತೀಯರ ಪೈಕಿ 13 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಗೊಂಡಿದ್ದ ಓರ್ವ ಭಾರತೀಯ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮಂಗಳವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ಸೋಮವಾರ ಸಂಜೆ ಒಮಾನ್‌ನ ಲಿಮಾ ಸಮೀಪ 'ಎಂಎಸ್‌ವಿ ಅಲ್ ಜುಸೂಫಿ' ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಖಂಡಿಸಿದೆ.

ಹಡಗಿನಲ್ಲಿದ್ದ 14 ಭಾರತೀಯ ನಾಗರಿಕರ ಪೈಕಿ 13 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಾಯಗೊಂಡಿದ್ದ ಮತ್ತೋರ್ವ ಭಾರತೀಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಕುಟುಂಬದವರಿಗೆ ಸಚಿವಾಲಯ ಸಂತಾಪ ಸೂಚಿಸಿದೆ.

ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಕ್ಷಿಸಲ್ಪಟ್ಟ ಭಾರತೀಯರನ್ನು ಹಾಗೂ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರವನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ಕರೆತರಲು ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿ ಸಂಗತಿಯಾಗಿವೆ ಎಂದು ಭಾರತ ಅಭಿಪ್ರಾಯಪಟ್ಟಿದೆ. ಉದ್ವಿಗ್ನತೆಯನ್ನು ತಕ್ಷಣ ಕಡಿಮೆಗೊಳಿಸುವುದರ ಜತೆಗೆ, ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಲ್ಲ ರಾಷ್ಟ್ರಗಳಿಗೆ ಭಾರತ ಮತ್ತೊಮ್ಮೆ ಮನವಿ ಮಾಡಿದೆ.

ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಬೇಕಾದರೆ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಈ ಪ್ರದೇಶದ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಸಂಚಾರ ಮತ್ತು ವ್ಯಾಪಾರ ವಹಿವಾಟುಗಳಿಗೆ ಯಾವುದೇ ಅಡೆತಡೆಯಿಲ್ಲದಂತೆ ಆದಷ್ಟು ಶೀಘ್ರವಾಗಿ ಸಹಜ ಸ್ಥಿತಿ ಮರುಸ್ಥಾಪಿಸಬೇಕು ಎಂದು ಭಾರತ ಒತ್ತಾಯಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande