ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರಿಂದ ಮೀನುಗಾರಿಕಾ ಹಡಗು ‘ಅಜಿನಿ’ ಬಿಡುಗಡೆ: 20 ಸಿಬ್ಬಂದಿಯ ಸುರಕ್ಷಿತ ರಕ್ಷಣೆ
ನವದೆಹಲಿ, 03 ನವೆಂಬರ್ (ಹಿ.ಸ.): ಸೊಮಾಲಿಯಾ ಕರಾವಳಿಯಲ್ಲಿ ಸಶಸ್ತ್ರ ಕಡಲ್ಗಳ್ಳರು ಅಪಹರಿಸಿದ್ದ ‘ಅಜಿನಿ’ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಬಿಡುಗಡೆಗೊಳಿಸಿದ್ದು, ಹಡಗಿನಲ್ಲಿದ್ದ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ. 48 ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ
ನೌಕಾಪಡೆ ಬಿಡುಗಡೆ ಮಾಡಿರುವ ಪೋಟೋ


ನವದೆಹಲಿ, 03 ನವೆಂಬರ್ (ಹಿ.ಸ.):

ಸೊಮಾಲಿಯಾ ಕರಾವಳಿಯಲ್ಲಿ ಸಶಸ್ತ್ರ ಕಡಲ್ಗಳ್ಳರು ಅಪಹರಿಸಿದ್ದ ‘ಅಜಿನಿ’ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಬಿಡುಗಡೆಗೊಳಿಸಿದ್ದು, ಹಡಗಿನಲ್ಲಿದ್ದ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ. 48 ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಸೊಮಾಲಿಯಾದ ಈಶಾನ್ಯ ಕರಾವಳಿಯಲ್ಲಿ ಕಳೆದ ತಿಂಗಳ ಆರಂಭದಲ್ಲಿ ಸಶಸ್ತ್ರ ಕಡಲ್ಗಳ್ಳರ ಗುಂಪು ಮೀನುಗಾರಿಕಾ ಹಡಗನ್ನು ಅಪಹರಿಸಿತ್ತು. ಈ ಹಡಗನ್ನು ವಾಣಿಜ್ಯ ಹಡಗುಗಳ ಮೇಲೆ ಮತ್ತಷ್ಟು ಕಡಲ್ಗಳ್ಳರ ದಾಳಿ ನಡೆಸಲು ತಾಯಿಹಡಗಿನಂತೆ ಬಳಸುವ ಸಾಧ್ಯತೆ ಇದ್ದುದರಿಂದ ಈ ಘಟನೆ ಕಡಲ ಭದ್ರತೆಗೆ ಗಂಭೀರ ಸವಾಲಾಗಿತ್ತು.

ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ನೌಕಾಪಡೆ, ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ಯುದ್ಧನೌಕೆಯನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಿತು. ಇದಕ್ಕೆ ಕಡಲ ಕಣ್ಗಾವಲು ವಿಮಾನದ ನೆರವು ಒದಗಿಸಲಾಯಿತು. ನಿರಂತರ ನಿಗಾ ವಹಿಸಿದ ಎರಡೂ ಘಟಕಗಳು ಅಪಹೃತ ಹಡಗಿನ ಚಲನವಲನಗಳನ್ನು ಪತ್ತೆಹಚ್ಚಿ, ಅದರ ಚಲನೆ ನಿಯಂತ್ರಿಸುವ ಹಾಗೂ ತಪ್ಪಿಸಿಕೊಳ್ಳದಂತೆ ತಡೆಯುವ ಕಾರ್ಯತಂತ್ರ ರೂಪಿಸಿದವು.

ಇದೇ ವೇಳೆ, ಭಾರತೀಯ ವಾಯುಪಡೆಯ ಸಿ-17 ವಿಮಾನದ ಮೂಲಕ ನಿಖರವಾಗಿ ಪ್ಯಾರಾಚೂಟ್ ಮೂಲಕ ಇಳಿಸುವ ಕಾರ್ಯಾಚರಣೆ ನಡೆಸಿ ನೌಕಾಪಡೆಯ ವಿಶೇಷ ತರಬೇತಿ ಪಡೆದ ಸಾಗರ ಕಮಾಂಡೋಗಳನ್ನು ಸ್ಥಳಕ್ಕೆ ನಿಯೋಜಿಸಲಾಯಿತು.

ಸಮನ್ವಯದೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನೌಕಾಪಡೆಯ ಸಿಬ್ಬಂದಿ ಹಡಗನ್ನು ವಶಕ್ಕೆ ಪಡೆದು ಕಡಲ್ಗಳ್ಳರ ಬೆದರಿಕೆಯನ್ನು ಹತ್ತಿಕ್ಕಿದರು. ಬಳಿಕ ಹಡಗಿನಲ್ಲಿದ್ದ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಯಿತು.

ಈ ಯಶಸ್ವಿ ಕಾರ್ಯಾಚರಣೆಯು ಭಾರತೀಯ ನೌಕಾಪಡೆಯ ಉನ್ನತ ಕಾರ್ಯಾಚರಣಾ ಸಿದ್ಧತೆ ಹಾಗೂ ಸಂಕೀರ್ಣ ಕಡಲ ಭದ್ರತಾ ಕಾರ್ಯಾಚರಣೆಗಳನ್ನು ವಿವಿಧ ರಕ್ಷಣಾ ಪಡೆಗಳ ಸಮನ್ವಯದೊಂದಿಗೆ ನಿರ್ವಹಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು ತುರ್ತು ನೆರವು ಒದಗಿಸುವ ಮೊದಲ ಪ್ರತಿಕ್ರಿಯೆದಾರ ಹಾಗೂ ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ತನ್ನ ಬದ್ಧತೆಯನ್ನು ಮುಂದುವರಿಸಿದೆ. ನಾವಿಕರ ಸುರಕ್ಷತೆ, ಪ್ರಮುಖ ಕಡಲ ವ್ಯಾಪಾರ ಮಾರ್ಗಗಳ ರಕ್ಷಣೆ ಹಾಗೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷಿತ ಮತ್ತು ಸ್ಥಿರ ಕಡಲ ಪರಿಸರ ನಿರ್ಮಾಣಕ್ಕೆ ಭಾರತೀಯ ನೌಕಾಪಡೆ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande