
ನವದೆಹಲಿ, 03 ನವೆಂಬರ್ (ಹಿ.ಸ.):
ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಆಮದು ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ 1945ರ ಔಷಧ ನಿಯಮಗಳಿಗೆ ತಿದ್ದುಪಡಿ ತರಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ. ಇದರ ಭಾಗವಾಗಿ ದೇಶದಾದ್ಯಂತ ಹೆಚ್ಚುವರಿ ಒಳನಾಡು ಸರಕು ಸಾಗಣೆ ಕೇಂದ್ರಗಳು, ವಿಶೇಷ ಆರ್ಥಿಕ ವಲಯಗಳು ಹಾಗೂ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಧಿಕೃತ ಆಮದು ಕೇಂದ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ.
ಪ್ರಸ್ತಾವಿತ ತಿದ್ದುಪಡಿಯಂತೆ ಹರಿಯಾಣದ ಸೋನಿಪತ್, ಪಿಯಾಲಾ ಮತ್ತು ಹರ್ಸರು; ಉತ್ತರ ಪ್ರದೇಶದ ದಾದ್ರಿ; ಗುಜರಾತ್ನ ಗಾಂಧಿಧಾಮ್ ಮತ್ತು ಮುಂದ್ರಾ; ತೆಲಂಗಾಣದ ಹೈದರಾಬಾದ್ನ ಸನತ್ ನಗರ ಮತ್ತು ತಿಮ್ಮಾಪುರದಲ್ಲಿರುವ ಒಳನಾಡು ಸರಕು ಸಾಗಣೆ ಕೇಂದ್ರಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.
ಇದರ ಜತೆಗೆ ಕರ್ನಾಟಕದ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಒಳನಾಡು ಸರಕು ಸಾಗಣೆ ಕೇಂದ್ರ ಹಾಗೂ ಬೊಮ್ಮಸಂದ್ರದ ವಿಶೇಷ ಆರ್ಥಿಕ ವಲಯವನ್ನೂ ಅಧಿಕೃತ ಆಮದು ಮಾರ್ಗಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ. ಉತ್ತರ ಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ವಿಮಾನದ ಮೂಲಕ ಔಷಧಗಳ ಆಮದಿಗೆ ಅನುಮೋದಿತ ಕೇಂದ್ರವನ್ನಾಗಿ ಸೇರ್ಪಡೆಗೊಳಿಸುವ ಉದ್ದೇಶವಿದೆ.
ಪ್ರಸ್ತುತ ಔಷಧ ನಿಯಮಗಳು-1945ರ ನಿಯಮ 43ಎ ಅಡಿಯಲ್ಲಿ ಔಷಧಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಅನುಮತಿಸಲಾದ ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ರಸ್ತೆ ಗಡಿದಾಟು ಕೇಂದ್ರಗಳು ಸೇರಿದಂತೆ ವಿವಿಧ ಪ್ರವೇಶ ಸ್ಥಳಗಳನ್ನು ನಿರ್ದಿಷ್ಟಪಡಿಸಲಾಗಿದೆ. ಈಗಾಗಲೇ ಅಧಿಕೃತ ಆಮದು ಮಾರ್ಗಗಳ ಪಟ್ಟಿಯಲ್ಲಿರುವ ಮಧ್ಯಪ್ರದೇಶದ ಇಂದೋರ್ನ ಧನ್ನಾಡ್ ಮತ್ತು ತಿಹಿಯ ಒಳನಾಡು ಸರಕು ಸಾಗಣೆ ಕೇಂದ್ರಗಳ ಜಾಲಕ್ಕೂ ಹೊಸ ಕೇಂದ್ರಗಳು ಸೇರ್ಪಡೆಯಾಗಲಿವೆ.
ಈ ವಿಸ್ತರಣೆಯಿಂದ ಆಮದುದಾರರು ತಮ್ಮ ಉತ್ಪಾದನಾ ಘಟಕಗಳು, ಗೋದಾಮುಗಳು ಮತ್ತು ವಿತರಣಾ ಕೇಂದ್ರಗಳಿಗೆ ಸಮೀಪದಲ್ಲಿಯೇ ಆಮದು ಸರಕುಗಳನ್ನು ವಿಲೇವಾರಿ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ಒಳನಾಡಿನ ಸಾರಿಗೆ ದೂರ ಕಡಿಮೆಯಾಗುವುದರ ಜತೆಗೆ ಸಾಗಣೆ ವೆಚ್ಚ ತಗ್ಗಲಿದೆ. ಅಲ್ಲದೆ, ಆಮದು ಮಾಡಿಕೊಂಡ ಆರೋಗ್ಯ ಉತ್ಪನ್ನಗಳ ಸಾಗಣೆಯಲ್ಲಿ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.
ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಪೂರೈಕೆ ಸರಪಳಿಯನ್ನು ಬಲಪಡಿಸುವುದು, ಆಮದು ಪ್ರಕ್ರಿಯೆಯಲ್ಲಿ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವುದು ಹಾಗೂ ಅಗತ್ಯ ಆರೋಗ್ಯ ಉತ್ಪನ್ನಗಳು ದೇಶದ ವಿವಿಧ ಭಾಗಗಳಿಗೆ ಸಕಾಲದಲ್ಲಿ ತಲುಪುವಂತೆ ಮಾಡುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತಾವಿತ ತಿದ್ದುಪಡಿ ಕುರಿತು ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನ ಕಾರ್ಯದರ್ಶಿ (ಔಷಧ ನಿಯಂತ್ರಣ), ಕರ್ತವ್ಯ ಭವನ-1, ನವದೆಹಲಿ ವಿಳಾಸಕ್ಕೆ ಅಥವಾ drugsdiv-mohfw@gov.in ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.