
ನವದೆಹಲಿ, 03 ನವೆಂಬರ್ (ಹಿ.ಸ.):
ನ್ಯಾಯಾಲಯಗಳ ಕಾರ್ಯವೈಖರಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ, ಕಾಗದರಹಿತ ವ್ಯವಸ್ಥೆ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆ ನವೆಂಬರ್ 4ರಂದು ‘ಇ-ಫೈಲಿಂಗ್ 3.0: ಪ್ರಕ್ರಿಯೆಯಿಂದ ಪ್ರಾಯೋಗಿಕ ಅನುಷ್ಠಾನದವರೆಗೆ’ ವಿಷಯದ ಕುರಿತು ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ನ ಇ-ಸಮಿತಿಯ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
‘ಇ-ಫೈಲಿಂಗ್ 3.0’ ವೇದಿಕೆಯ ಕಾರ್ಯವೈಖರಿ ಹಾಗೂ ಅದರ ವಿವಿಧ ಸೌಲಭ್ಯಗಳ ಕುರಿತು ಸರ್ಕಾರಿ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರದ ವತಿಯಿಂದ ವಿಶೇಷ ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿದೆ.
ಈ ಅಧಿವೇಶನಗಳಲ್ಲಿ ಇ-ನ್ಯಾಯಾಲಯಗಳ ಕಾರ್ಯನಿರ್ವಹಣೆ, ಏಕ ಪ್ರವೇಶ ವ್ಯವಸ್ಥೆ, ಇ-ನ್ಯಾಯಾಲಯಗಳ ಸೇವೆಗಳ ಮೊಬೈಲ್ ಅನ್ವಯಿಕೆ ಹಾಗೂ ಇ-ಫೈಲಿಂಗ್ 3.0ರ ಪ್ರಮುಖ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಸರ್ಕಾರಿ ವಕೀಲರು ಮತ್ತು ವಿವಿಧ ಇಲಾಖೆಗಳಿಗಾಗಿ ಲಭ್ಯವಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಮುಕ್ತ ಚರ್ಚೆ ನಡೆಯಲಿದೆ.
ಇ-ನ್ಯಾಯಾಲಯಗಳ ಯೋಜನೆಯ ಮೂರನೇ ಹಂತದ ಪ್ರಮುಖ ಉದ್ದೇಶ ನ್ಯಾಯಾಲಯಗಳ ಸಂಪೂರ್ಣ ಪ್ರಕ್ರಿಯೆಯನ್ನು ಆರಂಭದಿಂದ ಅಂತ್ಯದವರೆಗೆ ಡಿಜಿಟಲೀಕರಣಗೊಳಿಸುವುದು ಹಾಗೂ ನಾಗರಿಕರಿಗೆ ಸುಲಭವಾಗಿ ವಿದ್ಯುನ್ಮಾನ ಸೇವೆಗಳನ್ನು ಒದಗಿಸುವುದಾಗಿದೆ.
ದೇಶದ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳ ಪೈಕಿ ಕೇಂದ್ರ ಸರ್ಕಾರದ ಸಚಿವಾಲಯಗಳು, ವಿವಿಧ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ಪಾಲು ಗಣನೀಯವಾಗಿದೆ. ಹೀಗಾಗಿ ಈ ಇಲಾಖೆಗಳು ಇ-ಫೈಲಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಯಕ್ಷಮತೆ ಹೆಚ್ಚುವುದರ ಜತೆಗೆ ನ್ಯಾಯಾಲಯಗಳಲ್ಲಿನ ಭೌತಿಕ ದಾಖಲೆ ಮತ್ತು ಕಾಗದಪತ್ರಗಳ ಬಳಕೆಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಡಿಜಿಟಲ್, ಕಾಗದರಹಿತ ಹಾಗೂ ನಾಗರಿಕ ಕೇಂದ್ರಿತ ನ್ಯಾಯ ವಿತರಣಾ ವ್ಯವಸ್ಥೆಯನ್ನು ರೂಪಿಸುವ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ವ್ಯವಸ್ಥಿತಗೊಳಿಸುವ ಕೇಂದ್ರ ಸರ್ಕಾರದ ಬದ್ಧತೆಗೆ ಈ ಕಾರ್ಯಾಗಾರ ಸಾಕ್ಷಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.