ಜಾತಿ ಗಣತಿ ವರದಿ ತಕ್ಷಣ ಬಿಡುಗಡೆಗೆ ಅಹಿಂದ ಒಕ್ಕೂಟ ಆಗ್ರಹ
ಹುಬ್ಬಳ್ಳಿ, 03 ನವೆಂಬರ್ (ಹಿ.ಸ.): ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ನಾಯ್ಕ್ ಅವರ ನೇತೃತ್ವದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)–2025ರ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರ ತಕ್ಷಣವೇ ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಅಧಿಕೃತವಾಗಿ ಜ
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಮುಖಂಡರು


ಹುಬ್ಬಳ್ಳಿ, 03 ನವೆಂಬರ್ (ಹಿ.ಸ.):

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ನಾಯ್ಕ್ ಅವರ ನೇತೃತ್ವದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)–2025ರ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರ ತಕ್ಷಣವೇ ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಅಧಿಕೃತವಾಗಿ ಜಾರಿಗೆ ತರಬೇಕು ಎಂದು ಅಹಿಂದ ಒಕ್ಕೂಟ ಕರ್ನಾಟಕ ಆಗ್ರಹಿಸಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಒಕ್ಕೂಟದ ಸಂಚಾಲಕ ಸಿದ್ದಣ ತೇಜಿ, ಜಾತಿ ಗಣತಿ ವರದಿಯು ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ. ರಾಜ್ಯದ ಶೋಷಿತ, ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನೈಜ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಸುವ ಮಹತ್ವದ ದಾಖಲೆಯಾಗಿದೆ. ಆಯೋಗವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸಂಪೂರ್ಣ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ವರದಿಯನ್ನು ಬಿಡುಗಡೆ ಮಾಡಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಲವು ಸಂಘಟನೆಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ನ್ಯಾಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಜಾತಿ ಗಣತಿ ವರದಿ ಬಿಡುಗಡೆಗೆ ತಡೆಯೊಡ್ಡಲು ಪ್ರಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಈ ಪ್ರಕರಣದಲ್ಲಿ ಸರ್ಕಾರ ಮೌನವಾಗಿರದೆ ಸಕ್ರಿಯವಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಬೇಕು. ಹಿರಿಯ ವಕೀಲರನ್ನು ನೇಮಿಸಿ ಜಾತಿ ಗಣತಿ ವರದಿಯ ಪರವಾಗಿ ಸಮರ್ಥವಾಗಿ ವಾದ ಮಂಡಿಸಬೇಕು. ಕಾನೂನು ತೊಡಕುಗಳನ್ನು ನಿವಾರಿಸಿ ವರದಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಳೆ ಬೆಳಿಗ್ಗೆ ಅಹಿಂದ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರ ನಿಯೋಗ ಭೇಟಿ ಮಾಡಲಿದೆ. ಜಾತಿ ಗಣತಿ ವರದಿಯನ್ನು ತಕ್ಷಣ ಸಾರ್ವಜನಿಕಗೊಳಿಸಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಸಮಿತಿಯ ವರದಿಯ ಪ್ರಕಾರ, 2ಎ ಪ್ರವರ್ಗದಿಂದ ಶೇ.7ರಷ್ಟು ಮೀಸಲಾತಿಯನ್ನು ತೆಗೆದು ಕುರುಬ ಹಾಗೂ ಧನಗರ, ಖುಟೆಕರ, ಹಟ್ಕರ್ ಸೇರಿದಂತೆ ಸಮಾನಾರ್ಥಕ ಪದಗಳ ಸಮುದಾಯಗಳಿಗೆ ಪ್ರತ್ಯೇಕ 1ಬಿ ಪ್ರವರ್ಗವನ್ನು ರಚಿಸಿ, ಈ ಕುರಿತು ಅಧಿಕೃತ ರಾಜ್ಯಪತ್ರದ ಆದೇಶ ಹೊರಡಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಜಾತಿ ಗಣತಿ ವರದಿಯನ್ನು ತಕ್ಷಣ ಬಿಡುಗಡೆ ಮಾಡುವುದು, ನ್ಯಾಯಾಲಯದಲ್ಲಿ ಸರ್ಕಾರ ವರದಿಯ ಪರವಾಗಿ ನಿಲ್ಲುವುದು ಹಾಗೂ ವರದಿಯ ಆಧಾರದ ಮೇಲೆ ಶೋಷಿತ ವರ್ಗಗಳಿಗೆ ನ್ಯಾಯಯುತ ಸೌಲಭ್ಯ ಮತ್ತು ಪ್ರಾತಿನಿಧ್ಯ ಕಲ್ಪಿಸುವುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ. ಸಾಮಾಜಿಕ ಸಮಾನತೆ ಮತ್ತು ಎಲ್ಲ ಸಮುದಾಯಗಳಿಗೂ ನ್ಯಾಯಯುತ ಅವಕಾಶ ದೊರೆಯಲು ಸಮೀಕ್ಷೆಯ ವರದಿ ಜಾರಿಯಾಗುವುದು ಅಗತ್ಯವಾಗಿದೆ ಎಂದು ಸಿದ್ದಣ್ಣ ತೇಜಿ‌ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande