
ನವದೆಹಲಿ, 27 ನವೆಂಬರ್ (ಹಿ.ಸ.):
ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಪೊಲೀಸರು ನಡೆಸುತ್ತಿರುವ ವಿಶೇಷ ಕಾರ್ಯಾಚರಣೆಯಲ್ಲಿ ಉತ್ತರ ದೆಹಲಿಯ ಬಾಡಾ ಹಿಂದೂರಾವ್ ಪ್ರದೇಶದಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ 12 ಮತ್ತು 10 ವರ್ಷದ ಇಬ್ಬರು ಅಪ್ರಾಪ್ತ ಮಕ್ಕಳೂ ಸೇರಿದ್ದಾರೆ.
ಪೊಲೀಸರ ಪ್ರಕಾರ, ಪರಿಶೀಲನೆಯ ವೇಳೆ ಆರು ಮಂದಿಯೂ ಬಾಂಗ್ಲಾದೇಶದ ಪ್ರಜೆಗಳೆಂಬುದು ದೃಢಪಟ್ಟಿದೆ. ಭಾರತದಲ್ಲಿ ವಾಸಿಸಲು ಅಗತ್ಯವಿರುವ ಮಾನ್ಯ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳು ಅವರ ಬಳಿ ಇರಲಿಲ್ಲ. ಹೀಗಾಗಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಎಲ್ಲರನ್ನೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಮುಂದೆ ಹಾಜರುಪಡಿಸಲಾಗಿದೆ.
ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಮಾಹಿತಿ ಆಧರಿಸಿ ಉತ್ತರ ಜಿಲ್ಲಾ ಮಾದಕವಸ್ತು ನಿಗ್ರಹ ದಳ, ವಿಶೇಷ ಕಾರ್ಯಪಡೆ ಹಾಗೂ ವಿದೇಶಿಯರ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಡಾ ಹಿಂದೂರಾವ್ನ ಸರ್ಕಾರಿ ಬಾಲಕಿಯರ ಶಾಲೆಯ ಸಮೀಪ ದಾಳಿ ನಡೆಸಿ ಮೊಹಮ್ಮದ್ ಜಹಾಂಗೀರ್ ಹುಸೇನ್ (50) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ತಾನು ಬಾಂಗ್ಲಾದೇಶದ ಪ್ರಜೆ ಎಂದು ಒಪ್ಪಿಕೊಂಡಿರುವ ಆತ, ಯಾವುದೇ ಮಾನ್ಯ ಪ್ರಯಾಣ ಮತ್ತು ವಲಸೆ ದಾಖಲೆಗಳಿಲ್ಲದೆ ಕುಟುಂಬದೊಂದಿಗೆ ಭಾರತದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ಆತನ ಕುಟುಂಬದ ಇತರ ಐವರನ್ನೂ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರಲ್ಲಿ ಕೊಹಿನೂರ್ (40), ನೂರ್ ಮೊಹಮ್ಮದ್ (20), ಆಸಿಫ್ (18) ಹಾಗೂ 12 ಮತ್ತು 10 ವರ್ಷದ ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಇವರ ದಾಖಲೆಗಳನ್ನು ಪರಿಶೀಲಿಸಿದಾಗ ಬಾಂಗ್ಲಾದೇಶದ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಈ ಕುಟುಂಬವು ದೆಹಲಿಯ ಸದರ್ ಬಜಾರ್ನ ಆಜಾದ್ ಮಾರ್ಕೆಟ್ ಪ್ರದೇಶದಲ್ಲಿ ವಾಸಿಸುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಮಂದಿಗೂ ಅರುಣಾ ಆಸಫ್ ಅಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನವೆಂಬರ್ 26ರಂದು ದೆಹಲಿಯ ಎಫ್ಆರ್ಆರ್ಒ ಮುಂದೆ ಹಾಜರುಪಡಿಸಲಾಗಿದೆ. ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪೊಲೀಸರ ವರದಿಯನ್ನು ಪರಿಶೀಲಿಸಿದ ಕಚೇರಿ, 2025ರ ವಲಸೆ ಮತ್ತು ವಿದೇಶಿಯರ ಕಾಯ್ದೆಯ ನಿಯಮಗಳಡಿ ನಿರ್ಬಂಧ ಆದೇಶ ಹೊರಡಿಸಿದೆ.
ಅದರಂತೆ ಮುಂದಿನ ಕ್ರಮ ಕೈಗೊಳ್ಳುವವರೆಗೆ ಆರು ಮಂದಿಯ ಸಂಚಾರವನ್ನು ಸರಾಯ್ ರೋಹಿಲ್ಲಾದ ಶಹಜಾದಾ ಬಾಗ್ನಲ್ಲಿರುವ ಸೇವಾ ಸದನದ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ.
ಈ ಕುಟುಂಬದ ಶಾಶ್ವತ ವಿಳಾಸ ಬಾಂಗ್ಲಾದೇಶದ ನಾರಾಯಣಗಂಜ್ ಜಿಲ್ಲೆಯ ಸೋನಾರಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಪುರ್ದಿ ಗ್ರಾಮ ಎಂದು ದಾಖಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ ಮೂರು ಪೊಲೀಸ್ ಘಟಕಗಳು ಸಮನ್ವಯದಿಂದ ಕಾರ್ಯಾಚರಣೆ ನಡೆಸಿದ್ದು, ಪರಿಶೀಲನೆಯ ಬಳಿಕ ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಇಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.