
ಹುಬ್ಬಳ್ಳಿ, 25 ನವೆಂಬರ್ (ಹಿ.ಸ.):
ಆಸ್ತಿ ಹಂಚಿಕೆ ವಿಚಾರವಾಗಿ ಉಂಟಾದ ಜಗಳದಲ್ಲಿ ಮಗನೊಬ್ಬ ತನ್ನ ತಂದೆಯ ಸಹೋದರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿಯ ಮೆಹಬೂಬ್ ನಗರ ಬಾನತಿಕಟ್ಟದಲ್ಲಿ ನಡೆದಿದೆ.
ಅನ್ವರ್ ಖಾನ್ ಪಠಾಣ್ (46) ಕೊಲೆಯಾದ ವ್ಯಕ್ತಿ. ಅಜಗರ್ ಖಾನ್ ಅವರ ಮಗ ಸಿರಾಜ್ ಖಾನ್ ಪಠಾಣ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಅಜಗರ್ ಮತ್ತು ಅನ್ವರ್ ಸಹೋದರರಾಗಿದ್ದು, ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು.
ಮನೆ ಮತ್ತು ಆಸ್ತಿ ಪಾಲಿನ ವಿಚಾರವಾಗಿ ಸಹೋದರರ ಕುಟುಂಬಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಮಂಗಳವಾರ ರಾತ್ರಿ ಮನೆ ಎದುರು ಎರಡೂ ಕುಟುಂಬಗಳ ನಡುವೆ ಮತ್ತೆ ಗಲಾಟೆ ಆರಂಭವಾಗಿದೆ. ಈ ವೇಳೆ ಏಕಾಏಕಿ ಸಿರಾಜ್ ಖಾನ್ ಪಠಾಣ್ ತನ್ನ ಚಿಕ್ಕಪ್ಪ ಅನ್ವರ್ ಖಾನ್ ಅವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಅನ್ವರ್ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಘಟನೆಯ ವಿವರ ಪಡೆದ ಅವರು, ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.