
ಬೆಂಗಳೂರು, 25 ನವೆಂಬರ್ (ಹಿ.ಸ.):
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಒಂಬತ್ತನೇ ದಿನವೂ ಮುಂದುವರಿದಿದ್ದು, ಹೋರಾಟಕ್ಕೆ ಚಿತ್ರನಟಿ ತಾರಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ತಾರಾ, “ದುಡಿಯುವ ಹೆಣ್ಣುಮಕ್ಕಳನ್ನು ಬೀದಿಗೆ ತಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಿಸಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಒಂಬತ್ತು ದಿನಗಳಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ. ಇವರ ಕಷ್ಟಗಳನ್ನು ಕೇಳುವ ಕಿವಿಗಳು ಸರ್ಕಾರಕ್ಕೆ ಇರಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಆಶಾ ಕಾರ್ಯಕರ್ತೆಯರಿಗೆ ನಿಯಮಿತವಾಗಿ ವೇತನ ದೊರೆಯಬೇಕು. ಅವರಿಗೆ ಕಾರ್ಮಿಕರ ಸ್ಥಾನಮಾನ ನೀಡಿ, ಸೇವಾ ಭದ್ರತೆ ಒದಗಿಸಬೇಕು. ಆದಷ್ಟು ಬೇಗ ಅವರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತರಬೇಕು. ತಿಂಗಳಿಗೆ ಕನಿಷ್ಠ 15 ಸಾವಿರ ರೂ. ಗೌರವಧನ ನೀಡಲೇಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ಕಳೆದ 11 ತಿಂಗಳಲ್ಲಿ ಕೇವಲ ಐದು ತಿಂಗಳ ವೇತನ ಮಾತ್ರ ಪಾವತಿಸಿರುವ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಜನರ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರಿಗೆ ಈ ರೀತಿಯ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.
ಸಚಿವ ನರೇಂದ್ರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ತಾರಾ, “ಸ್ವಾಮಿ, ಹಾರ ಹಾಕಿಸಿಕೊಳ್ಳಲು ನೀವೇನು ರಾಜರಲ್ಲ. ನಿಮ್ಮನ್ನು ಅಧಿಕಾರಕ್ಕೆ ತರುವವರು ಜನರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
“ಹೆಣ್ಣುಮಕ್ಕಳನ್ನು ಗೌರವಿಸಬೇಕು. ದುಡಿಯುವ ಮಹಿಳೆಯರನ್ನು ಅವಮಾನಿಸುವವರು ಎಲ್ಲಿಯೂ ಉದ್ಧಾರವಾಗುವುದಿಲ್ಲ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ಅಭಿವೃದ್ಧಿ ಸಾಧ್ಯ; ಇಲ್ಲದಿದ್ದರೆ ಸರ್ವನಾಶವಾಗುತ್ತದೆ” ಎಂದು ಎಚ್ಚರಿಸಿದರು.
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅವರ ಹೋರಾಟಕ್ಕೆ ಶೀಘ್ರ ಪರಿಹಾರ ದೊರೆಯಬೇಕು ಎಂದು ನಟಿ ತಾರಾ ಒತ್ತಾಯಿಸಿದರು. ಒಂಬತ್ತು ದಿನಗಳಿಂದ ಮಳೆ, ಚಳಿ ಹಾಗೂ ಅನಾರೋಗ್ಯದ ನಡುವೆಯೂ ಪ್ರತಿಭಟನೆ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಅವರ ಬೆಂಬಲ ಮತ್ತಷ್ಟು ಬಲ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R