2027ರ ಜನವರಿಯಲ್ಲಿ ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಫೆಬ್ರವರಿಯಲ್ಲಿ ಮಹಿಳೆಯರ ಡಬ್ಲ್ಯು100 ಟೂರ್ನಿ
2027ರ ಜನವರಿ 4ರಿಂದ 9ರವರೆಗೆ 11ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿ ನಡೆಯಲಿದ್ದು, ಫೆಬ್ರುವರಿ 14ರಿಂದ 21ರವರೆಗೆ ಮಹಿಳೆಯರ ಡಬ್ಲ್ಯು100 ಅಂತರರಾಷ್ಟ್ರೀಯ ಟೆನಿಸ್ ಟೂರ್ನಿ ಆಯೋಜನೆಯಾಗಲಿದೆ. ಎರಡೂ ಟೂರ್ನಿಗಳು ಕಬ್ಬನ್ ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.
Bengaluru-Open-Tennis-Tournament-2027-ATP-Challenger-W100-Womens-Tournament


ಬೆಂಗಳೂರು, 24 ನವೆಂಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2027ರ ಆರಂಭದಲ್ಲಿ ಎರಡು ಪ್ರಮುಖ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಗಳು ನಡೆಯಲಿವೆ.

11ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯು 2027ರ ಜನವರಿ 4ರಿಂದ 9ರವರೆಗೆ ನಡೆಯಲಿದ್ದು, ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ನ ಡಬ್ಲ್ಯು100 ಟೂರ್ನಿಯು ಫೆಬ್ರುವರಿ 14ರಿಂದ 21ರವರೆಗೆ ಆಯೋಜನೆಯಾಗಲಿದೆ.

ನಗರದ ಕಬ್ಬನ್ ಪಾರ್ಕ್ನಲ್ಲಿರುವ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಎರಡೂ ಟೂರ್ನಿಗಳ ಪಂದ್ಯಗಳು ನಡೆಯಲಿವೆ.

ಎಟಿಪಿ ಚಾಲೆಂಜರ್ 125 ವಿಭಾಗದ ಬೆಂಗಳೂರು ಓಪನ್ ಟೂರ್ನಿಯು ₹2.20 ಕೋಟಿ ಬಹುಮಾನ ಮೊತ್ತ ಹೊಂದಿದ್ದರೆ, ಮಹಿಳೆಯರ ಡಬ್ಲ್ಯು100 ಟೂರ್ನಿಯ ಬಹುಮಾನ ಮೊತ್ತ ₹10 ಕೋಟಿಯಾಗಿದೆ.

ವಿಶ್ವದ ವಿವಿಧ ದೇಶಗಳ ಉದಯೋನ್ಮುಖ ಆಟಗಾರರು ಹಾಗೂ ಭಾರತದ ಪ್ರಮುಖ ಟೆನಿಸ್ ತಾರೆಯರು ಈ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

2026ರ ಮಹಿಳೆಯರ ಡಬ್ಲ್ಯು100 ಟೂರ್ನಿಯಲ್ಲಿ ಭಾರತದ ವೈಷ್ಣವಿ ಅಡ್ಕರ್ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದರು. ಡಬ್ಲ್ಯು100 ಮಟ್ಟದ ಟೂರ್ನಿಯ ಪ್ರಶಸ್ತಿ ಸುತ್ತಿಗೆ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಮಹೇಶ್ವರ್ ರಾವ್, ಬೆಂಗಳೂರು ನಗರ ಕ್ರೀಡಾ ಸಂಸ್ಕೃತಿಯ ನೆಲೆಯಾಗಿದೆ. 2027ರ ಆರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎರಡು ಟೆನಿಸ್ ಟೂರ್ನಿಗಳಿಗೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿ.

ದೇಶದ ಯುವ ಆಟಗಾರರು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಈ ಟೂರ್ನಿಗಳು ಉತ್ತಮ ಅವಕಾಶ ಕಲ್ಪಿಸಲಿವೆ ಎಂದು ತಿಳಿಸಿದ್ದಾರೆ.

ಅಖಿಲ ಭಾರತ ಟೆನಿಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ಮಾತನಾಡಿ, ಬೆಂಗಳೂರು ಓಪನ್ ಟೂರ್ನಿಯು ಸುಮಿತ್ ನಾಗಲ್ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಅವರಂತಹ ಆಟಗಾರರು ವಿಶ್ವ ಟೆನಿಸ್ನಲ್ಲಿ ಗುರುತಿಸಿಕೊಳ್ಳಲು ಮಹತ್ವದ ವೇದಿಕೆಯಾಗಿದೆ.

ಸುಮಿತ್ ನಾಗಲ್ 2017ರಲ್ಲಿ ಚಾಂಪಿಯನ್ ಆಗಿದ್ದು, 2024ರಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದಿದ್ದರು. ಪ್ರಜ್ಞೇಶ್ ಗುಣೇಶ್ವರನ್ 2018ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಮಹಿಳೆಯರ ಡಬ್ಲ್ಯು100 ಟೂರ್ನಿಯು ದೇಶದ ಮಹಿಳಾ ಟೆನಿಸ್ ಕ್ಷೇತ್ರದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಒಟ್ಟಾರೆ, 2027ರ ಆರಂಭದಲ್ಲಿ ನಡೆಯಲಿರುವ ಈ ಎರಡು ಅಂತರರಾಷ್ಟ್ರೀಯ ಟೂರ್ನಿಗಳು ಬೆಂಗಳೂರಿನ ಕ್ರೀಡಾ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಭಾರತೀಯ ಟೆನಿಸ್ ಆಟಗಾರರಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಲಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande