ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಕೈಬಿಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ: ಆರ್. ಅಶೋಕ್ ಎಚ್ಚರಿಕೆ
ಬೆಂಗಳೂರು, 02 ನವೆಂಬರ್ (ಹಿ.ಸ.): ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನರನ್ನು ಯಾಮಾರಿಸುವುದು ಮತ್ತು ಮನಬಂದಂತೆ ಬೆಲೆ ಏರಿಸುವುದೇ ಎರಡು ಪ್ರಮುಖ ತತ್ವಗಳಾಗಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ನವೆಂಬರ್ 5ರಿಂದ ಜಾರಿಗೆ ಬರಲಿರುವ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನ
ಅಶೋಕ ಫೈಲ್ ಪೋಟೋ


ಬೆಂಗಳೂರು, 02 ನವೆಂಬರ್ (ಹಿ.ಸ.):

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನರನ್ನು ಯಾಮಾರಿಸುವುದು ಮತ್ತು ಮನಬಂದಂತೆ ಬೆಲೆ ಏರಿಸುವುದೇ ಎರಡು ಪ್ರಮುಖ ತತ್ವಗಳಾಗಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ನವೆಂಬರ್ 5ರಿಂದ ಜಾರಿಗೆ ಬರಲಿರುವ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಹಾಲು, ಮೊಸರು, ವಿದ್ಯುತ್, ಕುಡಿಯುವ ನೀರು, ಆಸ್ತಿ ತೆರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಲೆ ಮತ್ತು ತೆರಿಗೆ ಹೊರೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯ ಹೆಸರಿನಲ್ಲಿ ಒಂದು ಕೈಯಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿ, ಮತ್ತೊಂದು ಕೈಯಲ್ಲಿ ಪುರುಷರು ಸೇರಿದಂತೆ ಇಡೀ ಕುಟುಂಬದ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಬೈರತಿ ಸುರೇಶ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿರುವ ಅಶೋಕ್, ರಾಜ್ಯದ ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಬೆಲೆ ಏರಿಕೆಯ ಮೂಲಕ ಭರಿಸಬೇಕೇ ಎಂದು ಕೇಳಿದ್ದಾರೆ.

ಹಾಲಿನ ದರ, ಬಸ್ ಪ್ರಯಾಣ ದರ, ವಿದ್ಯುತ್ ದರ, ಕುಡಿಯುವ ನೀರಿನ ದರ, ಆಸ್ತಿ ತೆರಿಗೆ, ಅಗತ್ಯ ವಸ್ತುಗಳ ಬೆಲೆ ಹಾಗೂ ವಿವಿಧ ತೆರಿಗೆಗಳ ಹೊರೆ ಹೆಚ್ಚುತ್ತಿರುವುದರಿಂದ ಜನಸಾಮಾನ್ಯರ ಜೀವನ ದುಬಾರಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು 9,000 ಕೋಟಿ ರೂ.ಗಳಿಗೂ ಅಧಿಕ ನಷ್ಟದಲ್ಲಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ನಷ್ಟಕ್ಕೆ ತನ್ನ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ಮರೆಮಾಚಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯ ನೆಪ ಹೇಳುವ ಬದಲು ಆಡಳಿತಾತ್ಮಕ ವೈಫಲ್ಯಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳಿರುವ ಸರ್ಕಾರ, ಇದೀಗ ಅದರ ಹೊರೆಯನ್ನು ಜನರ ಜೇಬಿನಿಂದ ವಸೂಲಿ ಮಾಡಲು ಮುಂದಾಗಿದೆ. ಜನರಿಗೆ ಬೆಲೆ ಏರಿಕೆಯ ಭರವಸೆಯಲ್ಲ, ಬದುಕಿನಲ್ಲಿ ನೆಮ್ಮದಿಯ ಭರವಸೆ ಬೇಕಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಜನವಿರೋಧಿ ಎಂದು ಆಕ್ಷೇಪಿಸಿರುವ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಜನರ ಪರವಾಗಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande