ಅಭಿವೃದ್ಧಿ ಹೊಂದಿದ ಭಾರತ ಗುರಿಯೊಂದಿಗೆ ದೀರ್ಘಕಾಲೀನ ಹೂಡಿಕೆಗೆ ಆದ್ಯತೆ ನೀಡಿ: ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ ಕರೆ
ನವದೆಹಲಿ, 19 ನವೆಂಬರ್ (ಹಿ.ಸ.): ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತದ ಗುರಿಯನ್ನು ಸಾಕಾರಗೊಳಿಸಲು ದೇಶದ ಉದ್ಯಮ ವಲಯ ಮುಂದಾಗಬೇಕು. ಮುಂದಿನ 20 ವರ್ಷಗಳಲ್ಲಿ ಭಾರತೀಯ ಉದ್ಯಮ ಯಾವ ಸಾಧನೆ ಮಾಡಬಹುದು ಎಂಬುದನ್ನು ಈಗಲೇ ನಿರ್ಧರಿಸುವ ಸಮಯ ಬಂದಿದೆ. ದೀರ್ಘಕಾಲೀನ ಹೂಡಿಕೆ ನಿರ್ಧಾರಗಳಲ್ಲಿ ಭಾರತಕ್
कार्यक्रम को संबोधित भारतीय प्रधानमंत्री


ನವದೆಹಲಿ, 19 ನವೆಂಬರ್ (ಹಿ.ಸ.):

ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತದ ಗುರಿಯನ್ನು ಸಾಕಾರಗೊಳಿಸಲು ದೇಶದ ಉದ್ಯಮ ವಲಯ ಮುಂದಾಗಬೇಕು. ಮುಂದಿನ 20 ವರ್ಷಗಳಲ್ಲಿ ಭಾರತೀಯ ಉದ್ಯಮ ಯಾವ ಸಾಧನೆ ಮಾಡಬಹುದು ಎಂಬುದನ್ನು ಈಗಲೇ ನಿರ್ಧರಿಸುವ ಸಮಯ ಬಂದಿದೆ. ದೀರ್ಘಕಾಲೀನ ಹೂಡಿಕೆ ನಿರ್ಧಾರಗಳಲ್ಲಿ ಭಾರತಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನವದೆಹಲಿಯ ಭಾರತ ಮಂಟಪದಲ್ಲಿ ಗುರುವಾರ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ವಾರ್ಷಿಕ ಮಹಾಸಭೆ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸ್ವಾವಲಂಬಿಯಾದಂತೆ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ದೇಶದಲ್ಲಿಯೇ ಯಾವೆಲ್ಲ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಸಾಧ್ಯವಿದೆ ಎಂಬುದರ ಕುರಿತು ಉದ್ಯಮ ವಲಯ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ಔಷಧ ಉದ್ಯಮವನ್ನು ಉದಾಹರಣೆಯಾಗಿ ಪರಿಗಣಿಸಬಹುದು ಎಂದರು.

ಭಾರತವನ್ನು ಜಗತ್ತಿನ ಔಷಧಾಲಯ ಎಂದು ಕರೆಯಲಾಗುತ್ತದೆ. ಆದರೂ ಪ್ರತಿ ವರ್ಷ ಸಕ್ರಿಯ ಔಷಧೀಯ ಘಟಕಗಳು, ಬೃಹತ್ ಪ್ರಮಾಣದ ಔಷಧಗಳು ಹಾಗೂ ಔಷಧ ಮಧ್ಯವರ್ತಿ ಉತ್ಪನ್ನಗಳಿಗಾಗಿ ಕೋಟ್ಯಂತರ ಡಾಲರ್ ವೆಚ್ಚ ಮಾಡಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂತಹ ನೂರಾರು ಉತ್ಪನ್ನಗಳಿಗಾಗಿ ಭಾರತ ವಿದೇಶಗಳ ಮೇಲೆ ಅವಲಂಬಿತವಾಗಿದೆ. ದೇಶದಲ್ಲಿಯೇ ಅವುಗಳನ್ನು ಉತ್ಪಾದಿಸಲು ಅಗತ್ಯವಾದ ತಂತ್ರಜ್ಞಾನ ಮತ್ತು ಬೃಹತ್ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಉದ್ಯಮ ವಲಯಕ್ಕೆ ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿಯೂ ಉದ್ಯಮಿಗಳು ಹೂಡಿಕೆ ಹೆಚ್ಚಿಸಬೇಕು. ನಿರ್ದಿಷ್ಟ ವಿದೇಶಿ ಮಾರುಕಟ್ಟೆಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಾಸಾರ್ಹ ಖರೀದಿ ವ್ಯವಸ್ಥೆ ರೂಪಿಸಬೇಕು. ಆಯಾ ಮಾರುಕಟ್ಟೆಗಳಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ತಯಾರಿಸಬೇಕು. ಇದರಿಂದ ಭಾರತೀಯ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ದೇಶದ ಗುರುತಾಗಿ ಹೊರಹೊಮ್ಮಲಿವೆ ಎಂದು ಹೇಳಿದರು.

ಫಿಕ್ಕಿ ಸಂಸ್ಥೆ 100 ವರ್ಷಗಳನ್ನು ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕ್ರಿಯಾಶೀಲವಾಗಿದ್ದು, ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತನ್ನನ್ನು ರೂಪಿಸಿಕೊಳ್ಳುತ್ತಾ ದೇಶದ ಆರ್ಥಿಕ ಪ್ರಗತಿಯಲ್ಲಿ ಪಾತ್ರವಹಿಸಿರುವುದು ಮಹತ್ವದ ಸಾಧನೆ ಎಂದರು.

ಕಳೆದ 100 ವರ್ಷಗಳ ಭಾರತದ ಆರ್ಥಿಕ ಪಯಣವನ್ನು ಉಲ್ಲೇಖಿಸಿದ ಅವರು, ಕಳೆದ 12 ವರ್ಷಗಳಲ್ಲಿ ಸಾಮೂಹಿಕ ಪ್ರಯತ್ನಗಳ ಮೂಲಕ ದೇಶ ಹಲವು ಸಾಧನೆಗಳನ್ನು ಮಾಡಿದೆ. ಇಂದು ಭಾರತದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದ್ದು, ಬಡತನದಿಂದ ಹೊರಬರುತ್ತಿರುವ ಜನರ ಸಂಖ್ಯೆಯೂ ವೇಗವಾಗಿ ಏರಿಕೆಯಾಗಿದೆ. ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಕೇವಲ 12ರಿಂದ 13 ವರ್ಷಗಳ ಅವಧಿಯಲ್ಲಿ ಭಾರತದ 50 ಕೋಟಿ ಜನರು ಬಡತನವನ್ನು ಮೀರಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಭಾರತ ಸಾಗುತ್ತಿರುವ ಅಭಿವೃದ್ಧಿಯ ಹಾದಿ ಸರಿಯಾದ ದಿಕ್ಕಿನಲ್ಲಿದೆ ಎಂಬುದಕ್ಕೆ ಫಿಕ್ಕಿ ಕೂಡ ಸಾಕ್ಷಿಯಾಗಿದೆ. ಈ ದಿಕ್ಕಿನಲ್ಲಿ ದೇಶದ ಯಶಸ್ಸಿಗೆ ಭದ್ರ ಬುನಾದಿ ಇದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 1930ರಲ್ಲಿ ಮಹಾತ್ಮ ಗಾಂಧೀಜಿ ನೀಡಿದ್ದ ಸ್ವದೇಶಿ ಮತ್ತು ಸ್ವಾವಲಂಬನೆಯ ಸಂದೇಶವನ್ನು ಸ್ಮರಿಸಿದ ಪ್ರಧಾನಿ ಮೋದಿ, ''ನೂರು ವರ್ಷಗಳಾಗಿವೆ. 1930ರಲ್ಲಿಯೇ ಗಾಂಧೀಜಿ ಇದೇ ಮಾತನ್ನು ಹೇಳಿದ್ದರು. ಇಷ್ಟು ವರ್ಷಗಳ ಬಳಿಕ ನಾನೂ ಅದನ್ನೇ ಹೇಳುತ್ತಿದ್ದೇನೆ. ನನ್ನ ಮಾತನ್ನು ನಂಬದಿದ್ದರೂ ಗಾಂಧೀಜಿಯವರ ಮಾತನ್ನಾದರೂ ನಂಬಿ. ಅವರು ಕೂಡ ಸ್ವದೇಶಿ ಮತ್ತು ಸ್ವಾವಲಂಬಿ ಭಾರತದ ಬಗ್ಗೆ ಪ್ರತಿಪಾದಿಸಿದ್ದರು. ನನ್ನ ಈ ಮಾತನ್ನು ಮನೆಮನೆಗೂ ತಲುಪಿಸಿ'' ಎಂದು ಕರೆ ನೀಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande