
ವ್ಯಾಂಕೋವರ್, 19 ನವೆಂಬರ್ (ಹಿ.ಸ.):
ಕೆನಡಾದಲ್ಲಿ ಭಾರತೀಯ ಮೂಲದ 25 ವರ್ಷದ ಯುವಕನ ಮೃತದೇಹ ಸುಟ್ಟು ಕರಕಲಾದ ಕಾರಿನೊಳಗೆ ಪತ್ತೆಯಾಗಿದ್ದು, ಇದು ಕೊಲೆ ಪ್ರಕರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಯುವಕನನ್ನು ಹತ್ಯೆಗೈದು ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿಗೆ ಬೆಂಕಿ ಹಚ್ಚಿರಬಹುದು ಎಂದು ಕೆನಡಾ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.
ಮೃತ ಯುವಕನನ್ನು ತುಷಾರ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಿವಾಸಿಯಾಗಿದ್ದರು. ಅಕ್ಟೋಬರ್ 29ರಂದು ರಾತ್ರಿ ಸುಮಾರು 10.30ರ ವೇಳೆಗೆ ಲ್ಯಾಂಗ್ಲಿಯ ರಾಲಿನ್ಸನ್ ಕ್ರೆಸೆಂಟ್ ಪ್ರದೇಶದಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದಾಗ ಕಾರಿನೊಳಗೆ ಮಾನವ ಅವಶೇಷಗಳು ಪತ್ತೆಯಾಗಿದ್ದವು.
ಬಳಿಕ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಕೆನಡಾದ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (ಐಎಚ್ಐಟಿ) ವಹಿಸಿಕೊಂಡಿದೆ. ಲ್ಯಾಂಗ್ಲಿ ಆರ್ಸಿಎಂಪಿ, ವಿಧಿವಿಜ್ಞಾನ ತಂಡ ಹಾಗೂ ಬ್ರಿಟಿಷ್ ಕೊಲಂಬಿಯಾ ಕೊರೋನರ್ಸ್ ಸೇವೆ ತನಿಖೆಗೆ ಸಹಕರಿಸುತ್ತಿವೆ.
ಉದ್ದೇಶಪೂರ್ವಕ ಹತ್ಯೆಯ ಶಂಕೆ
ತನಿಖಾಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ತುಷಾರ್ ಶರ್ಮಾ ಅವರ ಸಾವು ಆಕಸ್ಮಿಕ ಘಟನೆಯಲ್ಲ. ಅವರನ್ನು ಉದ್ದೇಶಪೂರ್ವಕವಾಗಿ ಹತ್ಯೆಗೈದು ಬಳಿಕ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಕಾರಿಗೆ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಇದರಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಕುರಿತು ಮಾಹಿತಿ ನೀಡಿರುವ ಐಎಚ್ಐಟಿ ಸಾರ್ಜೆಂಟ್ ಫ್ರೆಡಾ ಫಾಂಗ್, ತುಷಾರ್ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ಕೆನಡಾದಲ್ಲಿ ಅವರ ಪರಿಚಯದ ವಲಯವೂ ಸೀಮಿತವಾಗಿತ್ತು ಎಂದು ತಿಳಿಸಿದ್ದಾರೆ.
ಹೀಗಾಗಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರನ್ನು ಸಂಪರ್ಕಿಸಿ, ಸಾವಿಗೂ ಮುನ್ನ ಅವರ ಚಟುವಟಿಕೆಗಳು ಮತ್ತು ಸಂಪರ್ಕಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ಸಿಸಿಟಿವಿ ದೃಶ್ಯಾವಳಿ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸರೊಂದಿಗೆ ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಇನ್ನೊಂದೆಡೆ, ವ್ಯಾಂಕೋವರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುಷಾರ್ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಪ್ರಕರಣದ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಯುವಕನ ಸಾವಿನ ಹಿಂದಿನ ಕಾರಣ ಹಾಗೂ ಘಟನೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಕೆನಡಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R