
ನವದೆಹಲಿ, 19 ನವೆಂಬರ್ (ಹಿ.ಸ.):
ಸಗಟು ಮಾರಾಟ ಮಾಡುವ ಸಕ್ರಿಯ ಮತ್ತು ನಿಷ್ಕ್ರಿಯ ಔಷಧೀಯ ಪದಾರ್ಥಗಳಿಗೆ ಪ್ರತ್ಯೇಕ ಪರವಾನಗಿ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಸ್ತಾಪಿಸಿದೆ. ಈ ಸಂಬಂಧ 1945ರ ಔಷಧ ನಿಯಮಗಳಿಗೆ ತಿದ್ದುಪಡಿ ತರುವ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಹೊಸ ಪ್ರಸ್ತಾವನೆ ಜಾರಿಗೆ ಬಂದರೆ ಸಗಟು ಔಷಧ ವ್ಯಾಪಾರಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ.
ಔಷಧಗಳ ಪೂರೈಕೆ ಸರಪಳಿಯಲ್ಲಿ ಹೊಣೆಗಾರಿಕೆ ಹೆಚ್ಚಿಸುವುದು ಹಾಗೂ ಅವುಗಳ ವಿತರಣೆ ಮೇಲೆ ನಿಯಂತ್ರಣ ಬಲಪಡಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ.
ನವೆಂಬರ್ 2ರಂದು ಸಚಿವಾಲಯ ಹೊರಡಿಸಿರುವ ಜಿಎಸ್ಆರ್ 987 (ಇ) ಸಂಖ್ಯೆಯ ಕರಡು ಅಧಿಸೂಚನೆಯಲ್ಲಿ ಹೊಸದಾಗಿ ಅರ್ಜಿ ನಮೂನೆ 19-ಬಿಸಿ ಮತ್ತು ಪರವಾನಗಿ ನಮೂನೆ 20-ಬಿಸಿ ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಒಂದೇ ಪರವಾನಗಿ ಅಡಿಯಲ್ಲಿ ಔಷಧ ಸೂತ್ರೀಕರಣಗಳು ಹಾಗೂ ಬೃಹತ್ ಪ್ರಮಾಣದ ಔಷಧೀಯ ಪದಾರ್ಥಗಳ ಸಗಟು ಮಾರಾಟಕ್ಕೆ ಅವಕಾಶವಿದೆ. ಹೊಸ ವ್ಯವಸ್ಥೆಯಲ್ಲಿ ಇವೆರಡಕ್ಕೂ ಪ್ರತ್ಯೇಕ ಪರವಾನಗಿ ಪಡೆಯಬೇಕಾಗುತ್ತದೆ.
ಪ್ರಸ್ತಾವಿತ ನಿಯಮಗಳ ಪ್ರಕಾರ, ಸಗಟು ವ್ಯಾಪಾರಿಗಳು ತಮ್ಮ ಪರವಾನಗಿಯಲ್ಲಿ ವಹಿವಾಟು ನಡೆಸುವ ಬೃಹತ್ ಔಷಧೀಯ ಪದಾರ್ಥಗಳ ವರ್ಗಗಳನ್ನು ನಮೂದಿಸಬೇಕು. ಇದರಲ್ಲಿ 1985ರ ಮಾದಕ ದ್ರವ್ಯಗಳು ಮತ್ತು ಮನಃಪ್ರಭಾವಿ ವಸ್ತುಗಳ ಕಾಯ್ದೆಯ ವ್ಯಾಪ್ತಿಗೆ ಬರುವ ಔಷಧಗಳೂ ಸೇರಲಿವೆ.
ಅಲ್ಲದೆ, ಬೃಹತ್ ಔಷಧೀಯ ಪದಾರ್ಥಗಳ ಮಾರಾಟ ಮತ್ತು ವಿತರಣೆಯನ್ನು ಅರ್ಹ ವ್ಯಕ್ತಿಯ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕಾಗುತ್ತದೆ. ಇದರಿಂದ ಔಷಧಗಳ ಸಂಗ್ರಹಣೆ ಮತ್ತು ವಿತರಣೆಯ ಹೊಣೆಗಾರಿಕೆಯನ್ನು ನಿರ್ದಿಷ್ಟಪಡಿಸಲು ಸಾಧ್ಯವಾಗಲಿದೆ.
ಪ್ರತ್ಯೇಕ ಪರವಾನಗಿ ವ್ಯವಸ್ಥೆಯಿಂದ ಔಷಧಗಳ ಸಗಟು ಮಾರಾಟದ ಮೇಲೆ ಉತ್ತಮ ನಿಯಂತ್ರಣ ಸಾಧಿಸಬಹುದು ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ರೋಗಾಣುಗಳು ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುವ ಸಮಸ್ಯೆ ಹಾಗೂ ಮಾದಕ ದ್ರವ್ಯಗಳು ಮತ್ತು ಮನಃಪ್ರಭಾವಿ ಔಷಧಗಳ ಪೂರೈಕೆ ಮತ್ತು ಸಾಗಣೆ ಮೇಲೆ ನಿಗಾ ಬಲಪಡಿಸಲು ಸಹಕಾರಿಯಾಗಲಿದೆ.
ಈ ಪ್ರಸ್ತಾವನೆಗೆ 2025ರ ನವೆಂಬರ್ 17ರಂದು ನಡೆದ ಔಷಧ ಸಲಹಾ ಸಮಿತಿಯ 67ನೇ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಬಳಿಕ 2026ರ ಫೆಬ್ರವರಿ 16ರಂದು ನಡೆದ ಔಷಧ ತಾಂತ್ರಿಕ ಸಲಹಾ ಮಂಡಳಿಯ 93ನೇ ಸಭೆಯಲ್ಲಿಯೂ ಅನುಮೋದನೆ ದೊರೆತಿತ್ತು.
ಈಗಾಗಲೇ ಪರವಾನಗಿ ಹೊಂದಿರುವ ವ್ಯಾಪಾರಿಗಳಿಗೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಚಿವಾಲಯ ಕಾಲಾವಕಾಶ ನೀಡಿದೆ. ಹಾಲಿ ಪರವಾನಗಿಯ ನವೀಕರಣ ಅವಧಿ ಮುಗಿದ ನಂತರ ಅಥವಾ ತಿದ್ದುಪಡಿ ನಿಯಮಗಳ ಅಂತಿಮ ಅಧಿಸೂಚನೆ ಪ್ರಕಟಗೊಂಡ 12 ತಿಂಗಳ ನಂತರ, ಈ ಎರಡರಲ್ಲಿ ಯಾವುದು ತಡವಾಗಿ ಪೂರ್ಣಗೊಳ್ಳುತ್ತದೆಯೋ ಆ ಅವಧಿಯ ಬಳಿಕ ಹೊಸ ನಿಯಮಗಳು ಅನ್ವಯವಾಗಲಿವೆ.
ಕರಡು ನಿಯಮಗಳ ಕುರಿತು ಸಾರ್ವಜನಿಕರು ಹಾಗೂ ಸಂಬಂಧಪಟ್ಟ ವಲಯದವರು ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಬಹುದು. ಕರಡು ನಿಯಮಗಳ ಪ್ರತಿಗಳನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿದ ದಿನಾಂಕದಿಂದ 30 ದಿನಗಳೊಳಗೆ ತಮ್ಮ ಅಭಿಪ್ರಾಯಗಳನ್ನು ಸಚಿವಾಲಯಕ್ಕೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.