ಮರಕ್ಕೆ ಕಾರು ಡಿಕ್ಕಿ: ಸಪ್ತಗಿರಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ದುರ್ಮರಣ
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಪ್ತಗಿರಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
two-engineering-students-killed-car-crash-near-nelamangala


ಬೆಂಗಳೂರು, 17 ನವೆಂಬರ್ (ಹಿ.ಸ.):

ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಮೃತರನ್ನು ಬೆಂಗಳೂರಿನ ವೈಷ್ಣವಿ (20) ಹಾಗೂ ಜಾಹ್ನವಿ (20) ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.

ಕಾಲೇಜಿನ ಪ್ರಾಜೆಕ್ಟ್ ಕೆಲಸದ ನಿಮಿತ್ತ ವಿದ್ಯಾರ್ಥಿಗಳು ಕಾರಿನಲ್ಲಿ ಕುಣಿಗಲ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ವೈಷ್ಣವಿ ಮತ್ತು ಜಾಹ್ನವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಕಾರಿನಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದ ಬಳಿಕ ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸಪಟ್ಟು ಹೊರಕ್ಕೆಳೆದು ರಕ್ಷಿಸಿದ್ದಾರೆ. ಬಳಿಕ ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರು ಅಪಘಾತದಲ್ಲಿ ಮೃತಪಟ್ಟಿರುವುದು ಕಾಲೇಜು ವಲಯದಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande