
ಬೆಂಗಳೂರು, 17 ನವೆಂಬರ್ (ಹಿ.ಸ.):
ವಿದೇಶಿ ರಾಜಕಾರಣಿಯೊಬ್ಬರು ಭಾರತದ ಆಂತರಿಕ ರಾಜಕೀಯ ವಿಚಾರಗಳ ಕುರಿತು ಮಾತನಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿರುವುದಕ್ಕೆ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶದ ವಿಚಾರ ಬಂದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣದ ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ‘ಭಾರತ್ ಸಮ್ಮಿಟ್ 2026’ ಸಮಾವೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಮಾವೇಶದಲ್ಲಿ ಯುರೋಪಿಯನ್ ಸೋಷಿಯಲಿಸ್ಟ್ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಇಟಲಿಯ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಭಾಷಣ ಮಾಡಿದ್ದರು.
ಭಾಷಣದ ವೇಳೆ ಭಾರತದ ಆಂತರಿಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ನ ರಾಜಕೀಯ ಘೋಷಣೆಯಾದ ‘ವೋಟ್ ಚೋರ್, ಗದ್ದಿ ಛೋಡ್’ ಎಂಬ ಘೋಷಣೆಯನ್ನು ಕೂಗಿದ್ದರು. ಅಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಾದಿಸಿದ್ದರು.
ಈ ವೇಳೆ ವೇದಿಕೆಯ ಮುಂಭಾಗ ಕುಳಿತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ವಿದೇಶಿ ರಾಜಕಾರಣಿಯ ಮಾತುಗಳಿಗೆ ಚಪ್ಪಾಳೆ ತಟ್ಟಿ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ವಿದೇಶಿ ಪ್ರಜೆಯೊಬ್ಬರು ಭಾರತದ ಆಂತರಿಕ ರಾಜಕೀಯದ ಕುರಿತು ಮಾತನಾಡಿದಾಗ ಚಪ್ಪಾಳೆ ತಟ್ಟಿರುವುದನ್ನು ಪ್ರಶ್ನಿಸಿದ್ದಾರೆ.
“ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ. ಭಾರತ ಎಂದಾಗ ನಾವೆಲ್ಲ ಭಾರತಮಾತೆಯ ಮಕ್ಕಳು ಅಲ್ಲವೇ? ಇದನ್ನು ನೋಡಿದಾಗ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ?” ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.
ಮುಂದುವರಿದು, “ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ್” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R