ವಿಜಯೇಂದ್ರ ಮುಂದುವರಿಕೆ ಅಥವಾ ಹೊಸ ಮುಖಕ್ಕೆ ಮಣೆ? ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಲೆಕ್ಕಾಚಾರ; ಮುರುಗೇಶ ನಿರಾಣಿ ಹೆಸರು ಮುಂಚೂಣಿಯಲ್ಲಿ
ಬಾಗಲಕೋಟೆ, 17 ನವೆಂಬರ್ (ಹಿ.ಸ.) ರಾಜ್ಯ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತ ಚರ್ಚೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ವರಿಷ್ಠರು ಸೂಕ್ತ ನಾಯಕನ ಹುಡು
ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿರಾಣಿ ಪೈಪೋಟಿ


ಬಾಗಲಕೋಟೆ, 17 ನವೆಂಬರ್ (ಹಿ.ಸ.)

ರಾಜ್ಯ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತ ಚರ್ಚೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ವರಿಷ್ಠರು ಸೂಕ್ತ ನಾಯಕನ ಹುಡುಕಾಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರ ಹೆಸರು ರಾಜ್ಯಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ.

ಒಂದು ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನದ ಆಯ್ಕೆಯ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಮುರುಗೇಶ ನಿರಾಣಿ ಅವರಿಗೆ ಈಗ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಒಲಿಯಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಂದು ಸಿಎಂ ಸ್ಥಾನ, ಇಂದು ರಾಜ್ಯಾಧ್ಯಕ್ಷತೆ

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾದ ಸಂದರ್ಭ ಎದುರಾದಾಗ ಅವರ ಆಪ್ತ ವಲಯದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಮುರುಗೇಶ ನಿರಾಣಿ ಪ್ರಮುಖ ಆಯ್ಕೆಗಳಾಗಿ ಕಾಣಿಸಿಕೊಂಡಿದ್ದರು. ಇಬ್ಬರಲ್ಲಿ ಯಾರಿಗೆ ಮುಖ್ಯಮಂತ್ರಿ ಪಟ್ಟ ನೀಡಬೇಕು ಎಂಬ ಪ್ರಶ್ನೆ ಎದುರಾದಾಗ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಮುನ್ನೆಲೆಗೆ ತಂದಿದ್ದರು. ಇದರಿಂದಾಗಿ ಮುಖ್ಯಮಂತ್ರಿ ಆಗುವ ನಿರೀಕ್ಷೆಯಲ್ಲಿದ್ದ ನಿರಾಣಿ ಅವರ ಅಭಿಮಾನಿಗಳ ಆಸೆ ಕುದಲೆಳೆಯ ಅಂತರದಲ್ಲಿ ಕೈತಪ್ಪಿತ್ತು ಎಂಬುದು ರಾಜಕೀಯ ವಲಯದಲ್ಲಿ ಚರ್ಚಿತ ಸಂಗತಿ.

ಇದೀಗ ಅಂತಹುದೇ ಮತ್ತೊಂದು ರಾಜಕೀಯ ಸನ್ನಿವೇಶ ರಾಜ್ಯ ಬಿಜೆಪಿಯಲ್ಲಿ ನಿರ್ಮಾಣವಾಗುತ್ತಿದೆ. ಅಂದು ಮುಖ್ಯಮಂತ್ರಿ ಸ್ಥಾನದ ಆಯ್ಕೆ ಪ್ರಕ್ರಿಯೆ ನಡೆದಿದ್ದರೆ, ಇಂದು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತು ಚರ್ಚೆ ನಡೆಯುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮುಂದಿನ ರಾಜಕೀಯ ಜವಾಬ್ದಾರಿ ಏನು ಎಂಬ ಕುತೂಹಲದ ನಡುವೆಯೇ ನೂತನ ಅಧ್ಯಕ್ಷರ ಆಯ್ಕೆ ಕುರಿತು ಪಕ್ಷದೊಳಗೆ ಹಲವು ಲೆಕ್ಕಾಚಾರಗಳು ಆರಂಭವಾಗಿವೆ.

ಮುಂಬರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ಕುರಿತು ರಾಜಕೀಯ ವಿಶ್ಲೇಷಕ ಹಾಗೂ ಸ್ಥಳೀಯ ಪತ್ರಕರ್ತ ಸಿದ್ದನಗೌಡ ಬಿರಾದಾರ ಅವರು ತಮ್ಮ ರಾಜಕೀಯ ವಿಶ್ಲೇಷಣೆಯಲ್ಲಿ ಹಲವು ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ.

ವಿಜಯೇಂದ್ರ ಮುಂದುವರಿಕೆಗೆ ಒಂದು ಬಣದ ಒಲವು

2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಮುಂದುವರಿಸಬೇಕು ಎಂಬ ಅಭಿಪ್ರಾಯ ಪಕ್ಷದ ಒಂದು ವಲಯದಲ್ಲಿದೆ. ಮತ್ತೊಂದೆಡೆ ಪಕ್ಷದ ಸಂಘಟನೆ ಹಾಗೂ ಭವಿಷ್ಯದ ರಾಜಕೀಯ ಹಿತದೃಷ್ಟಿಯಿಂದ ನಾಯಕತ್ವ ಬದಲಾವಣೆ ಅಗತ್ಯ ಎಂಬ ವಾದವೂ ಮತ್ತೊಂದು ವಲಯದಲ್ಲಿ ಕೇಳಿಬರುತ್ತಿದೆ.

ಆದರೆ ಬಿಜೆಪಿ ಕೇಂದ್ರ ವರಿಷ್ಠರು ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಿದಂತೆ ಕಾಣಿಸುತ್ತಿಲ್ಲ. ರಾಜ್ಯದ ರಾಜಕೀಯ ಪರಿಸ್ಥಿತಿ, ಪಕ್ಷದ ಆಂತರಿಕ ಸಮೀಕರಣಗಳು ಹಾಗೂ ಮುಂಬರುವ ಚುನಾವಣೆಯ ಸವಾಲುಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ನಿಲ್ಲದ ನಾಯಕನ ಹುಡುಕಾಟ

2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ವರಿಷ್ಠರ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಕೇವಲ ಪಕ್ಷದ ಸಂಘಟನೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಪಕ್ಷದಿಂದ ದೂರವಾಗಿರುವ ನಾಯಕರನ್ನು ಮರಳಿ ಕರೆತರುವುದು, ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹಾಗೂ ಹೊಸ ನಾಯಕರನ್ನು ಪಕ್ಷದತ್ತ ಸೆಳೆಯುವ ಸಾಮರ್ಥ್ಯ ಹೊಂದಿರುವ ವ್ಯಕ್ತಿಯ ಅಗತ್ಯವಿದೆ ಎಂಬ ಚರ್ಚೆ ನಡೆಯುತ್ತಿದೆ.

ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯ ವಿಜಯೇಂದ್ರ ಅವರಲ್ಲಿದೆ ಎಂದು ವರಿಷ್ಠರು ಭಾವಿಸಿದರೆ ಅವರೇ ಮುಂದುವರಿಯಬಹುದು. ಇಲ್ಲವಾದಲ್ಲಿ ಪರ್ಯಾಯ ನಾಯಕನ ಆಯ್ಕೆಗೆ ಮುಂದಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕ ಮಹೇಶ ಟೆಂಗಿನಕಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರ ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲು ಸಿದ್ಧ

ಇದರ ಮಧ್ಯೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸಲು ಸಿದ್ಧ ಎಂಬ ಸಂದೇಶವನ್ನು ಮತ್ತೊಮ್ಮೆ ನೀಡಿದ್ದಾರೆ. ಪಕ್ಷ ಹಾಗೂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ತಮ್ಮಲ್ಲಿದೆ ಎಂದು ಹೇಳಿರುವ ಅವರು, ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳುವ ತಮ್ಮ ಆಸಕ್ತಿಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ನಿರಾಣಿ ಅವರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಪಕ್ಷದ ಸಂಘಟನೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಸಚಿವರಾಗಿ, ಶಾಸಕರಾಗಿ ಹಾಗೂ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅನುಭವ ಅವರ ರಾಜಕೀಯ ಬಲವಾಗಿದೆ ಎಂಬ ಅಭಿಪ್ರಾಯವೂ ಇದೆ.

ನಿರಾಣಿಗೆ ಪರ್ಯಾಯವಾಗಿ ಯಡಿಯೂರಪ್ಪನವರ ಬೆಂಬಲ?

ಹಿಂದೆ ಮುಖ್ಯಮಂತ್ರಿ ಸ್ಥಾನದ ಆಯ್ಕೆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುರುಗೇಶ ನಿರಾಣಿ ಅವರ ಹೆಸರನ್ನೂ ಪರಿಗಣನೆಯಲ್ಲಿಟ್ಟಿದ್ದರೂ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ಕಲ್ಪಿಸಿದ್ದರು. ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬದಲಿಗೆ ಬೇರೆ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಯಡಿಯೂರಪ್ಪನವರು ಯಾರ ಹೆಸರನ್ನು ಸೂಚಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಯಡಿಯೂರಪ್ಪನವರ ರಾಜಕೀಯ ಅನುಭವ ಹಾಗೂ ಪಕ್ಷದೊಳಗಿನ ಪ್ರಭಾವವನ್ನು ಗಮನಿಸಿದರೆ, ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಅಭಿಪ್ರಾಯವೂ ಮಹತ್ವ ಪಡೆಯಬಹುದು. ಒಂದು ವೇಳೆ ವಿಜಯೇಂದ್ರ ಅವರನ್ನು ಮುಂದುವರಿಸುವುದು ಸಾಧ್ಯವಾಗದಿದ್ದರೆ, ಪಕ್ಷದ ಸಂಘಟನೆಗೆ ಪೂರಕವಾಗುವ ನಾಯಕನ ಆಯ್ಕೆಗೆ ಅವರು ಒಲವು ತೋರಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಆ ಪರ್ಯಾಯ ಆಯ್ಕೆ ಮುರುಗೇಶ ನಿರಾಣಿ ಆಗಲಿದ್ದಾರೆಯೇ ಎಂಬುದು ಸದ್ಯದ ಕುತೂಹಲ.

ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ

ಮುರುಗೇಶ ನಿರಾಣಿ ಅವರು ಈಗಾಗಲೇ ಪಕ್ಷ ಹಾಗೂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಿಜೆಪಿ ರಾಜ್ಯ ಮತ್ತು ಕೇಂದ್ರ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು, ಕಳೆದ ಒಂದು ವರ್ಷದಿಂದ ತಮ್ಮ ರಾಜಕೀಯ ವಿರೋಧಿಗಳ ವಿಚಾರದಲ್ಲಿಯೂ ಹಿಂದಿನ ಕಠಿಣ ನಿಲುವಿಗಿಂತ ಮೃದು ಧೋರಣೆ ತೋರುತ್ತಿದ್ದಾರೆ ಎಂಬ ರಾಜಕೀಯ ವಿಶ್ಲೇಷಣೆಗಳಿವೆ.

ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಪಕ್ಷದಿಂದ ದೂರವಾದವರು, ಪಕ್ಷದಿಂದ ಉಚ್ಚಾಟನೆಗೊಂಡವರು ಹಾಗೂ ಬಿಜೆಪಿಗೆ ಮರಳಲು ಆಸಕ್ತಿ ಹೊಂದಿರುವವರನ್ನು ಒಗ್ಗೂಡಿಸಿಕೊಳ್ಳಬೇಕು ಎಂಬ ವಾದವನ್ನು ನಿರಾಣಿ ಹಲವು ಸಂದರ್ಭಗಳಲ್ಲಿ ಪ್ರತಿಪಾದಿಸುತ್ತ ಬಂದಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ನಾಯಕತ್ವದ ಅಗತ್ಯವಿದೆ ಎಂಬುದು ಅವರ ನಿಲುವಾಗಿದೆ.

ಬಹುಮತ ಗಳಿಸುವುದೇ ವರಿಷ್ಠರ ಮುಂದಿರುವ ಸವಾಲು

2028ರ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಸಂಘಟಿತ ಪ್ರಯತ್ನದ ಅಗತ್ಯವಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ನೆಲೆ ಬಲಪಡಿಸುವುದು, ಅಸಮಾಧಾನಿತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಪಕ್ಷ ತೊರೆದವರನ್ನು ಮರಳಿ ಕರೆತರುವುದು ಹಾಗೂ ಹೊಸ ರಾಜಕೀಯ ಸಮೀಕರಣಗಳನ್ನು ರೂಪಿಸುವುದು ವರಿಷ್ಠರ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಬಣಗಳನ್ನೂ ಒಗ್ಗೂಡಿಸಿಕೊಂಡು ಸಾಗಬಲ್ಲ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಮಾನದಂಡದಲ್ಲಿ ಮುರುಗೇಶ ನಿರಾಣಿ ಅವರ ಹೆಸರು ಮುನ್ನೆಲೆಗೆ ಬರುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಚುನಾವಣೆಯ ಸೇನಾನಿಯಾಗಲಿದ್ದಾರೆಯೇ ನಿರಾಣಿ?

ಮುಖ್ಯಮಂತ್ರಿ ಆಗುವ ಅವಕಾಶವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡಿದ್ದ ಮುರುಗೇಶ ನಿರಾಣಿ ಅವರಿಗೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ದೊರೆಯಲಿದೆಯೇ? ಒಂದು ವೇಳೆ ಅವರಿಗೆ ಈ ಅವಕಾಶ ಸಿಕ್ಕರೆ 2028ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಸಾರಥ್ಯ ವಹಿಸುವ ಜವಾಬ್ದಾರಿ ಅವರ ಹೆಗಲೇರಲಿದೆ.

ಇನ್ನೊಂದೆಡೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ಹೆಸರೂ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಯಲ್ಲಿ ಕೇಳಿಬರುತ್ತಿದೆ. ಅವರೂ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಎಂಬುದು ಗಮನಾರ್ಹ.

ಒಟ್ಟಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಹಲವು ನಾಯಕರ ಕಣ್ಣಿದೆ. ವಿಜಯೇಂದ್ರ ಅವರನ್ನೇ ಮುಂದುವರಿಸಲಾಗುತ್ತದೆಯೇ ಅಥವಾ ಹೊಸ ಮುಖಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿರಾಣಿ ಅವರಿಗೆ ಈ ಬಾರಿ ಅದೃಷ್ಟ ಒಲಿಯುತ್ತದೆಯೇ ಅಥವಾ ಮತ್ತೊಬ್ಬ ನಾಯಕನಿಗೆ ವರಿಷ್ಠರು ಮಣೆ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಂದು ಮುಖ್ಯಮಂತ್ರಿ ಸ್ಥಾನದ ಸನಿಹಕ್ಕೆ ಬಂದು ಅವಕಾಶ ವಂಚಿತರಾಗಿದ್ದ ನಿರಾಣಿ ಅವರಿಗೆ ಇಂದು ರಾಜ್ಯಾಧ್ಯಕ್ಷ ಸ್ಥಾನದ ಯೋಗ ಒಲಿಯುತ್ತದೆಯೇ ಎಂಬುದೇ ಸದ್ಯದ ರಾಜಕೀಯ ಕುತೂಹಲ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande