ಕುಮಾರಕೃಪ ಹೆಸರನ್ನು ‘ಗಂಗಾ’ ಎಂದು ಬದಲಿಸಿದ್ದಕ್ಕೆ ವಾಟಾಳ್ ಆಕ್ರೋಶ; ಮೆಜೆಸ್ಟಿಕ್ನಲ್ಲಿ ವಿನೂತನ ಪ್ರತಿಭಟನೆ
ಐತಿಹಾಸಿಕ ಕುಮಾರಕೃಪ ಕಟ್ಟಡಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ವಾಟಾಳ್ ನಾಗರಾಜ್ ಮೆಜೆಸ್ಟಿಕ್ನಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಹೆಸರು ಬದಲಾವಣೆ ಹಿಂಪಡೆಯದಿದ್ದರೆ ಕರ್ನಾಟಕ ಬಂದ್ಗೆ ಕರೆ ನೀಡುವ ಎಚ್ಚರಿಕೆ ನೀಡಿದರು.
Vatal-Nagaraj-Protests-Renaming-of-Kumar-Krupa-as-Ganga


ಬೆಂಗಳೂರು, 17 ನವೆಂಬರ್ (ಹಿ.ಸ.):

ಬೆಂಗಳೂರಿನ ಐತಿಹಾಸಿಕ ಕಟ್ಟಡ ಕುಮಾರಕೃಪಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೆಜೆಸ್ಟಿಕ್ನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೆಂಪೇಗೌಡ ಬಸ್ ನಿಲ್ದಾಣದ ಫುಟ್ಪಾತ್ ಮೇಲೆ ಮಲಗಿ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, “ಬೆಂಗಳೂರು ಕೆಂಪೇಗೌಡರ ಕಾಲದಿಂದಲೂ ಐತಿಹಾಸಿಕ ಮಹತ್ವ ಹೊಂದಿರುವ ನಗರ. ಕುಮಾರಕೃಪ ಕೂಡ ಇತಿಹಾಸ ಸಾರುವ ಪ್ರಮುಖ ಕಟ್ಟಡವಾಗಿದೆ.

ಸರ್ ಎಂ. ವಿಶ್ವೇಶ್ವರಯ್ಯ ಅವರ ಸಮಕಾಲೀನ ಆಡಳಿತಗಾರ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಕಾಲಘಟ್ಟದ ಐತಿಹಾಸಿಕ ಪರಂಪರೆಯೊಂದಿಗೆ ಈ ಕಟ್ಟಡ ಗುರುತಿಸಿಕೊಂಡಿದೆ.

ಸುಮಾರು 25 ಎಕರೆ ಪ್ರದೇಶ ಹೊಂದಿದ್ದ ಈ ಜಾಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಕುಮಾರಕೃಪ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡಿದೆ” ಎಂದು ಹೇಳಿದರು.

“ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ನೆನಪುಗಳನ್ನು ಹೊಂದಿರುವ ಈ ಸ್ಥಳದ ಮೂಲ ಹೆಸರನ್ನು ಬದಲಾಯಿಸಿರುವುದು ಬೇಸರದ ಸಂಗತಿ. ಐತಿಹಾಸಿಕ ಕಟ್ಟಡಗಳ ಪರಂಪರೆಯನ್ನು ಗೌರವಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಈ ರೀತಿಯ ಬದಲಾವಣೆ ಆಗಿರುವುದು ಸರಿಯಲ್ಲ. ಇದು ಇತಿಹಾಸಕ್ಕೆ ಅಗೌರವ ತೋರಿದಂತಾಗಿದೆ. ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಹೆಸರು ಬದಲಾಯಿಸುವುದಾದರೆ ಅಂತಹ ಕಟ್ಟಡಕ್ಕೆ ಬರಬೇಕಾದ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಕಚೇರಿಯನ್ನಾಗಿ ಕುಮಾರಕೃಪವನ್ನು ಬಳಸುವ ವಿಚಾರಕ್ಕೂ ವಿರೋಧ ವ್ಯಕ್ತಪಡಿಸಿದ ಅವರು, “ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ನಿವಾಸ ಅಥವಾ ಕಚೇರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದಕ್ಕೆ ನಮ್ಮ ವಿರೋಧವಿದೆ. ಕುಮಾರಕೃಪವನ್ನು ಮುಖ್ಯಮಂತ್ರಿ ಕಚೇರಿಯನ್ನಾಗಿ ಮಾಡಬಾರದು. ಕಟ್ಟಡದ ಮೂಲ ಹೆಸರು ಮತ್ತು ಐತಿಹಾಸಿಕ ಸ್ವರೂಪವನ್ನು ಉಳಿಸಬೇಕು” ಎಂದು ಆಗ್ರಹಿಸಿದರು.

ಹೆಸರು ಬದಲಾವಣೆ ಮತ್ತು ಕಟ್ಟಡದ ಬಳಕೆಯ ವಿಚಾರವಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್, ಅಗತ್ಯ ಬಿದ್ದರೆ ಕರ್ನಾಟಕ ಬಂದ್ಗೂ ಕರೆ ನೀಡಲಾಗುವುದು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande