
ವಿಜಯಪುರ, 17 ನವೆಂಬರ್ (ಹಿ.ಸ.)
ಪರಿಸರ ಸಂರಕ್ಷಣೆ, ಗೋಸಂರಕ್ಷಣೆ ಹಾಗೂ ಕನ್ನಡ ನಾಡು-ನುಡಿಯ ಅಭಿಮಾನವನ್ನು ಸಾರುವ ಉದ್ದೇಶದಿಂದ ಇಂಡಿ ನಗರದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ್ ತಿಳಿಸಿದ್ದಾರೆ
ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿ ಹಾಗೂ ಶ್ರೀ ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಸಾವಿರ ವೃಕ್ಷ ಅಭಿಯಾನ, ಗೋಶಾಲೆ ಕಟ್ಟಡದ ಭೂಮಿಪೂಜೆ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನುಡಿಗಳ ಸುಮಧುರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಸಾವಿರ ವೃಕ್ಷ ಅಭಿಯಾನದ ಮೂಲಕ ಹಸಿರು ಪರಿಸರ ನಿರ್ಮಾಣದ ಸಂದೇಶ ನೀಡಲಾಯಿತು. ಮರಗಿಡಗಳು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂಬ ಆಶಯವನ್ನು ಅಭಿಯಾನ ಸಾರಿತು.
ಇದೇ ಸಂದರ್ಭದಲ್ಲಿ ಗೋಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಗೋಸಂರಕ್ಷಣೆಯ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗೋವುಗಳ ರಕ್ಷಣೆ, ಪಾಲನೆ ಹಾಗೂ ಅವುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ್ದಾಗಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ನುಡಿಗಳ ಸುಮಧುರ ಸಂಗೀತ ಕಾರ್ಯಕ್ರಮವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಯ ವೈಭವವನ್ನು ಅನಾವರಣಗೊಳಿಸಿತು. ಒಟ್ಟಾರೆ ಪರಿಸರ ಪ್ರೇಮ, ಗೋಸಂರಕ್ಷಣೆ ಮತ್ತು ಕನ್ನಡಾಭಿಮಾನವನ್ನು ಒಂದೇ ವೇದಿಕೆಯಲ್ಲಿ ಮೇಳೈಸಿದ ಈ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande